ಮಡಿಕೇರಿ, ಡಿ. 21: ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ನಿರಾಶ್ರಿತರ ಹೋರಾಟದಲ್ಲಿ ಸಮಾಜ ಘಾತುಕ ಶಕ್ತಿಗಳು ಭಾಗಿಯಾಗಿ ಗಿರಿಜನರ ದಾರಿ ತಪ್ಪಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಅಂತವರ ಮೇಲೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರಿಗೆ ಸೂಚನೆ ನೀಡಿದರು.
ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ
(ಮೊದಲ ಪುಟದಿಂದ) ಅವರು ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳಿಗೆ ಕರಡಿಗೋಡು ಹಾಗೂ ದಿಡ್ಡಳ್ಳಿಯಲ್ಲಿ ಎಷ್ಟು ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ಬಯಸಿದರು. ಈ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯಲಿಲ್ಲ. ಇದರಿಂದ ಕೆರಳಿದ ಕೆಜಿಬಿಯವರು ಹಾಡಿವಾಸಿಗಳು ಸೂಕ್ತ ಸರ್ಕಾರಿ ಸೌಲಭ್ಯ ಸಿಗದೆ ಬೀದಿಗಿಳಿದು ಹೋರಾಟದಲ್ಲಿ ನಿರತರಾಗಿದ್ದಾರೆ. ಹೀಗಿದ್ದಾಗ್ಯೂ ಅಧಿಕಾರಿ ವರ್ಗ ಅವರನ್ನು ನಿರ್ಲಕ್ಷಿಸುವದು ನ್ಯಾಯವೇ? ಎಂದು ಪ್ರಶ್ನಿಸಿದರು. ಒಂದು ತಿಂಗಳೊಳಗೆ ಬಾಕಿ ಉಳಿದಿರುವ ಹಕ್ಕು ಪತ್ರ ವಿತರಣೆ ಮಾಡಲೇಬೇಕೆಂದು ಸಿಸಿಎಫ್ ಮನೋಜ್‍ಕುಮಾರ್ ಅವರಿಗೆ ಸೂಚನೆ ನೀಡಿದರು.
ದಿಡ್ಡಳ್ಳಿಯಲ್ಲಿ ಕೆಲ ನಕ್ಸಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಡಿ ಜನರ ಹೋರಾಟದಲ್ಲಿ ಭಾಗಿಯಾಗಿ ‘ನಕ್ಸಲಿಸಂ’ ಬಗ್ಗೆ ಉಪನ್ಯಾಸ ನೀಡಿ ಹಾಡಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಸದ ಪ್ರತಾಪ್ ಸಿಂಹ ಅವರೂ ಇದಕ್ಕೆ ದನಿಗೂಡಿಸಿ ಪಿಎಫ್‍ಐ ಸಂಘಟನೆ ಹೆಸರಿನಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಕೆಲವರು ಕೂಡ ಅಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮೆರೆಯುತ್ತಿದ್ದಾರೆ ಎಂದು ದೂರಿದರು. ನಕ್ಸಲ್ ಹಿನ್ನೆಲೆಯುಳ್ಳ ಕೆಲವರು ಹಾಡಿವಾಸಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎ.ಕೆ. ಮನುಮುತ್ತಪ್ಪ ಹೇಳಿದರು.
ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಶಾಸಕ - ಸಂಸದರು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಹೇಳಿದರು. ಪರಿಸ್ಥಿತಿ ಕೈ ಮೀರಿ ಜಿಲ್ಲೆಯಲ್ಲಿ ಶಾಂತಿ ಕದಡುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಸಂಸದರು ಸೂಚಿಸಿದರು.
ತೊಡಿಕಾನ - ಭಾಗಮಂಡಲ ರಸ್ತೆ ಕಾಮಗಾರಿ ಸಂಬಂಧ ಲೋಕೋಪಯೋಗಿ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು ಒಂದೂವೆ ವರ್ಷದಿಂದ ಈ ಬಗ್ಗೆ ಸಭೆಗಳಲ್ಲಿ ಪ್ರಸ್ತಾಪವಾಗುತ್ತಿದೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆ ಏಕೆ ನಿರ್ಲಕ್ಷಿಸುತ್ತಿದೆ ಎಂದು ಪ್ರಶ್ನಿಸಿದ ಸಂಸದ ಪ್ರತಾಪ್ ಕೂಡಲೇ ಕಾರ್ಯಪ್ರವೃತ್ತರಾಗದಿದ್ದರೆ ಕ್ರಮ ಜರುಗಿಸುವದಾಗಿ ಇಲಾಖಾಧಿಕಾರಿಗೆ ಎಚ್ಚರಿಕೆಯಿತ್ತರು.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಗ್ಯಾಸ್ ಇದ್ದರೂ ಇಲ್ಲದಿದ್ದರೂ ಸೀಮೆ ಎಣ್ಣೆ ವಿತರಿಸಬೇಕು ಎಂದು ಸುಭಾಷ್ ಸೋಮಯ್ಯ ಒತ್ತಾಯಿಸಿದರು. ಕೊಡಗಿನಲ್ಲಿ ಭತ್ತ ಬೆಳೆಯುವ ರೈತರಿಗೆ ಸೂಕ್ತ ಸಹಾಯಧನವನ್ನು ಸರ್ಕಾರ ನೀಡದಿದ್ದಲ್ಲಿ ಮುಂದಿನ ಬಾರಿಯಿಂದ ಜಿಲ್ಲೆಯ ರೈತರು ಭತ್ತ ಕೃಷಿಯಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಮನು ಮುತ್ತಪ್ಪ ಹೇಳಿದರು.
ಕುಂಡಾ ಮೇಸ್ತ್ರಿ ಕುಡಿಯುವ ನೀರಿನ ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಸಂಬಂಧಿಸಿದ ಅಧಿಕಾರಿಯನ್ನು ಪ್ರಶ್ನಿಸಿದ ಕೆಜಿಬಿ ಒಳಚರಂಡಿ ಹೆಸರಲ್ಲಿ ಮಡಿಕೇರಿ ನಗರದ ಬಹುತೇಕ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದೀರಿ ಕೇವಲ 6 ಇಂಚು ಪೈಪನ್ನು ಅಳವಡಿಸಿ ಅವೈಜ್ಞಾನಿಕ ಕಾಮಗಾಗಿ ಮಾಡಲಾಗುತ್ತಿದೆ. ಹೀಗೆ ಮುಂದುವರೆದರೆ, ನಿಮ್ಮ ವಿರುದ್ಧ ದೂರು ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಇದ್ದರು.