ಮಡಿಕೇರಿ, ನ. 26: ಜಿಲ್ಲೆಯಲ್ಲಿ ಹೋಂಸ್ಟೇಗಳನ್ನು ನೋಂದಣಿ ಮಾಡಿಸುವದು ಮೊದಲಿನಷ್ಟು ಸುಲಭವಾಗಿಲ್ಲ. ಮನೆಯನ್ನು ಬಾಡಿಗೆಗೆ ಪಡೆದು ಹೋಂಸ್ಟೇ ನಡೆಸುವದು; ಹಲವು ಮನೆಗಳನ್ನು ಬಾಡಿಗೆಗೆ ಪಡೆದು ಈ ವೃತ್ತಿ ಮಾಡುವದು; ಕಸ ವಿಲೇವಾರಿಗೆ ವ್ಯವಸ್ಥೆ ಸರಿ ಇಲ್ಲದಿರುವದು... ಹೀಗೆ ಹತ್ತು ಹಲವು ಅಂಶಗಳ ಬಗ್ಗೆ ಜಿಲ್ಲಾಡಳಿತ ಕೂಲಂಕಷ ಪರಿಶೀಲನೆ ನಡೆಸಿದ ಬಳಿಕವಷ್ಟೇ ನಿರಪೇಕ್ಷಣಾ ಪತ್ರ ನೀಡುತ್ತಿದೆ.

ಹೋಂಸ್ಟೇ ನಡೆಸುವ ಮಾಲೀಕ, ಜಾಗ ಮತ್ತು ಮನೆಯ ಮಾಲೀಕತ್ವದ ದಾಖಲೆಗಳೊಂದಿಗೆ ಸಂಬಂಧಿತ ನಗರಸಭೆ / ಪುರಸಭೆ / ಗ್ರಾ ಪಂಚಾಯಿತಿ / ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿ ಸದಸ್ಯರ ಹಾಜರಾತಿಯಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಇಂತಹ ಅರ್ಜಿಗಳನ್ನು ಪರಿಶೀಲಿಸಿ, ನೈಜ ದಾಖಲಾತಿಗಳಿದ್ದಲ್ಲಿ ಮಾತ್ರ ನಿರಪೇಕ್ಷಣಾ ಪತ್ರ ನೀಡಲಾಗುತ್ತದೆ. ಮಾಲೀಕರು ಬಾಡಿಗೆಗೆ ನೀಡಿದ್ದಲ್ಲಿ ಅರ್ಜಿಗಳನ್ನು ಅಲ್ಲಿಯೇ ತಿರಸ್ಕರಿಸಲಾಗುತ್ತದೆ. ಕೆಲವೊಂದು ಪಂಚಾಯಿತಿಗಳು ಪ್ರತಿ ಕೊಠಡಿಗೆ ಇಂತಿಷ್ಟು ಶುಲ್ಕ ವಿಧಿಸಿದರೆ, ಕೆಲವು ಸಂಸ್ಥೆಗಳು ಪ್ರತಿ ಮನೆಗೆ ಶುಲ್ಕ ಪಡೆಯುತ್ತಿವೆ.

ಅಲ್ಲಿಂದ ಪಡೆದ ಎನ್.ಓ.ಸಿ.ಯ ಪ್ರತಿಯೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನಿರಪೇಕ್ಷಣಾ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಅದು ಡಿವೈಎಸ್‍ಪಿ, ಸರ್ಕಲ್ ಇನ್ಸ್‍ಪೆಕ್ಟರ್ ಮುಖಾಂತರ ಸಂಬಂಧಿತ ಸಬ್ ಇನ್ಸ್‍ಪೆಕ್ಟರ್ ಕಚೇರಿ ತಲಪುತ್ತದೆ.

(ಮೊದಲ ಪುಟದಿಂದ) ಸಬ್ ಇನ್ಸ್‍ಪೆಕ್ಟರ್ ಅವರು ಸಿಬ್ಬಂದಿ ಸಹಿತ ಅರ್ಜಿದಾರರ ಮನೆ ಪರಿಶೀಲನೆ ನಡೆಸುತ್ತಾರೆ.

ಮಾಲೀಕರೊಂದಿಗೆ ಫೋಟೋ

ಈ ಬಾರಿಯ ನಿಯಮದಲ್ಲಿ ಯಾವದೇ ಪೊಲೀಸ್ ಎಸ್.ಐ. ಅವರು ಕಚೇರಿಯಲ್ಲೇ ಕುಳಿತು ದೃಢೀಕರಣ ಕೊಡುವ ‘ವ್ಯವಸ್ಥೆ'ಗೆ ಕಡಿವಾಣ ಹಾಕಲಾಗಿದೆ. ಮನೆಗೆ ಬರುವ ಎಸ್.ಐ. ಅವರೊಂದಿಗೆ ಮನೆಯ ಮಾಲೀಕನನ್ನು ಮನೆ ಎದುರಿಗೆ ನಿಲ್ಲಿಸಿ ಪೊಲೀಸ್ ಸಿಬ್ಬಂದಿ ಫೋಟೋ ಕ್ಲಿಕ್ಕಿಸುತ್ತಾರೆ. ಮನೆಯ ಕೊಠಡಿ, ಪ್ರವಾಸಿಗರಿಗೆ ಸೂಕ್ತವಾದ ಶೌಚಾಲಯ ವ್ಯವಸ್ಥೆ, ಸಿ.ಸಿ. ಕ್ಯಾಮರಾಗಳನ್ನು ಪರಿಶೀಲಿಸುತ್ತಾರೆ. ಮನೆಯ ಗೇಟ್‍ನಿಂದ ಆವರಣದವರೆಗೂ ಬೇರೆ ಬೇರೆ ಕ್ಯಾಮರಾಗಳನ್ನು ಅಳವಡಿಸಿದ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ.

ಸಿಬ್ಬಂದಿ ಮನೆಯ ಪೂರ್ಣ ಮಹಜರು ನಡೆಸಿ, ಪೂರ್ವ- ಪಶ್ಚಿಮ, ಉತ್ತರ - ದಕ್ಷಿಣ ದಿಕ್ಕುಗಳಲ್ಲಿರುವ ಅಂಶಗಳನ್ನು ನಮೂದಿಸಿಕೊಳ್ಳುತ್ತಾರೆ.

ನಂತರ ಪೊಲೀಸ್ ಠಾಣೆಯಲ್ಲಿ ಮಹಜರು ವರದಿ ಬರೆದು ಅಲ್ಲಿಗೆ ಮಾಲೀಕರೊಂದಿಗೆ ಇಬ್ಬರು ಸಾಕ್ಷಿಗಳನ್ನು ಕರೆಸಿ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಎಸ್.ಐ. ಅವರ ಶಿಫಾರಸಿನ ಪತ್ರ ಮತ್ತು ಸಿ.ಐ., ಡಿವೈಎಸ್‍ಪಿ ಅವರ ಮೂಲಕ ಎಸ್‍ಪಿ ಕಚೇರಿಗೆ ಬಂದು ಅಂತಿಮ ಪರಿಶೀಲನೆ ಬಳಿಕ ನಿರಪೇಕ್ಷಣಾ ಪತ್ರ ನೀಡಲಾಗುತ್ತದೆ.

ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಎನ್‍ಓಸಿ ಪತ್ರಗಳನ್ನು ಸ್ಕ್ಯಾನ್ ಮಾಡಿ ಇಂಟರ್‍ನೆಟ್ ಮೂಲಕ ತಿತಿತಿ.ಞಚಿಡಿಟಿಚಿಣಚಿಞಚಿಣouಡಿism.oಡಿg ಪ್ರವೇಶಿಸಿದರೆ, ಹೋಂಸ್ಟೇ ನೋಂದಣಿಯ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮಾಲೀಕನ ಫೋಟೋ, ಮನೆಯ ಫೋಟೋ, ಆಧಾರ್ ಕಾರ್ಡ್, ಫೋಟೋ, ಶೌಚಾಲಯ ಫೋಟೋ... ಹೀಗೆ ಹತ್ತು ಹಲವು ದಾಖಲಾತಿಗಳನ್ನು ಕಳುಹಿಸಿದ ಬಳಿಕ ಮನೆ ನೋಂದಾವಣೆಗೆ ಸಿದ್ಧ ಎಂಬ ಮಾಹಿತಿ ಬಂದು ರೂ. 500 ಶುಲ್ಕ ಪಾವತಿಸಲು ಮಾಹಿತಿ ಬರುತ್ತದೆ. ಅದಾದ ನಂತರ ಪ್ರವಾಸೋದ್ಯಮ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಪತ್ರ ನೀಡುತ್ತದೆ. ಗೋಲ್ಡ್ ಯಾ ಸಿಲ್ವರ್ ಎಂದು ವರ್ಗೀಕರಣ ಮಾಡಿಕೊಳ್ಳಲು ಬಯಸುವವರು ಮತ್ತೆ ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಬೇಕಿದೆ.

ಮನೆಯವರಿಗೂ ಅವಕಾಶ

ಒಂದೇ ಜಾಗದಲ್ಲಿ ಎರಡು ಮನೆಗಳಿದ್ದಲ್ಲಿ, ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ನೋಂದಣಿ ಮಾಡಲು ಅವಕಾಶವಿದ್ದು, ತಂದೆ- ತಾಯಿ, ಅಣ್ಣ - ತಮ್ಮಂದಿರಿಗೂ ಅವಕಾಶವಿದೆ.

ಇದುವರೆಗೆ ಸುಮಾರು 700ರಷ್ಟು ಅರ್ಜಿಗಳು ಪೊಲೀಸ್ ಇಲಾಖೆಗೆ ತಲಪಿರುವ ಸಾಧ್ಯತೆಯಿದ್ದು, ಪ್ರತಿ ಮನೆಗೆ ಭೇಟಿ, ದಾಖಲೆಗಳ ಪರಿಶೀಲನೆ ಹಾಗೂ ಇತರ ಕೆಲಸಗಳ ನಡುವೆ ಈ ಕೆಲಸದ ಒತ್ತಡ ಪೊಲೀಸರನ್ನು ಕಾಡುತ್ತಿದೆ. ಡಿಸೆಂಬರ್ 1 ನೋಂದಣಿಗೆ ಅಂತಿಮ ದಿನವಾಗಿದೆ. ನಂತರದ ದಿನಗಳಲ್ಲಿ ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಆದರೆ ಹಲವು ಸ್ಥಳೀಯ ಸಂಸ್ಥೆಗಳಲ್ಲೇ ಅರ್ಜಿಗಳು ವಿಲೇವಾರಿ ಆಗದಿದ್ದು, ಪೊಲೀಸ್ ಇಲಾಖೆಯಲ್ಲೂ ನೂರಾರು ಅರ್ಜಿಗಳು ಬಾಕಿ ಇರುವದರಿಂದ ಡಿಸೆಂಬರ್ 1ರ ಒಳಗೆ ನೋಂದಣಿ ಅಸಾಧ್ಯದ ಮಾತಾಗಿದೆ. -ಚಿದ್ದು.