ಮಡಿಕೇರಿ, ಜು. 19: ಕೊಡಗು ಹೋಂ ಸ್ಟೇ ಅಸೋಸಿಯೇಷನ್ ಸದಸ್ಯರು ಇತ್ತೀಚೆಗೆ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಕೂಡಲೇ ಸಮಗ್ರ ಪ್ರವಾಸೋದ್ಯಮ ಯೋಜನೆ ಒಂದನ್ನು ತಯಾರಿಸಿ ನೀಡಲು ಸಚಿವರು ಹೇಳಿದ್ದಾರೆ.ಕೊಡಗಿನಲ್ಲಿ ಅನಧಿಕೃತ ಹೋಂ ಸ್ಟೇ ದಂಧೆ, ಬೆಳೆಯದ ಪ್ರವಾಸೋದ್ಯಮ ಸೌಕರ್ಯಗಳು, ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಬದಲಾವಣೆ ಇತ್ಯಾದಿ ವಿಚಾರವಾಗಿ ಅಸೋಸಿಯೇಷನ್ ಅಧ್ಯಕ್ಷ ಮದನ್ ಸೋಮಣ್ಣ ಮತ್ತು ಸಮಿತಿ ಸದಸ್ಯರು ಮನವಿ ಮಾಡಿದರು. ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಹಿಡಿಯುವದಾಗಿ ಹೇಳಿದ ಸಚಿವರು ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ಡಾ. ರಮಣ ರೆಡ್ಡಿ ಹಾಗೂ ನಿರ್ದೇಶಕಿ ಎನ್. ಮಂಜುಳಾ ಅವರು ಅನಧಿಕೃತ ಹೋಂ ಸ್ಟೇ ತಡೆಗೆ ಕ್ರಮ ಹಾಗೂ ಹೊಸ ‘ರೇಟಿಂಗ್’ ಕ್ರಮದ ಕುರಿತು ಗಮನ ಹರಿಸುವಂತೆ ಸೂಚಿಸಿದರು. ಸಚಿವರೊಂದಿಗೆ ಸಮಾಲೋಚನೆಗೆ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಸಹಕರಿಸಿದರು.