ಸುಂಟಿಕೊಪ್ಪ, ನ. 30: ಇದ್ಯಾವೊದೋ ಸಂತೆ ಮಾರುಕಟ್ಟೆ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾದೀತು? ದಿನಂಪ್ರತಿ ಅಆಇಈ, 12, ಮಗ್ಗಿ ಪಠಿಸುವಿಕೆ ಹಾಗೂ ಪಠ್ಯ ವಿಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಕೇಳಿಬರುತ್ತಿದ್ದ 7ನೇ ಹೊಸಕೋಟೆ ಶಾಲಾವರಣದಲ್ಲಿ ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು ಬೆಳೆಸುವ ದಿಸೆಯಲ್ಲಿ ಮಕ್ಕಳ ಸಂತೆಯನ್ನು ನಡೆಸಲಾಯಿತು.
7ನೇ ಹೊಸಕೋಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಂದ್ರ ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳು ಪಾಠಪ್ರವಚನಕ್ಕೆ ಸೀಮಿತಗೊಳ್ಳದೆ ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳಲು ಅವರಿಗೆ ಉತ್ಸಾಹ ತುಂಬಿಸುವ ದಿಸೆಯಲ್ಲಿ ಶಾಲೆಯ ಮಕ್ಕಳಿಗೆ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ ಎಂದರು.
ಶಾಲೆಯ ಮೈದಾನವು ಅಕ್ಷರಶಃ ಸಂತೆ ಮಾರುಕಟ್ಟೆಯಂತೆ ಮಾರ್ಪಟಿದ್ದು ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ಗ್ರಾಮದಲ್ಲಿ ಬೆಳೆದ ಬಸಳೆ ಸೊಪ್ಪು, ಸಿಹಿ ಕುಂಬಳ, ಬೂದು ಕುಂಬಳ, ಸೌತೆ ಕಾಯಿ ಅಲಸಂಡೆ, ಬೀನ್ಸ್, ಚುರುಮುರಿ, ಇನ್ನಿತರ ತಿಂಡಿ ತಿನಿಸುಗಳೊಂದಿಗೆ ತಂಪುಪಾನೀಯ ಸೇರಿದಂತೆ ಹಣ್ಣುಗಳನ್ನು ಕತ್ತರಿಸಿ ಉತ್ಸಾಹದಿಂದ ಬಂದ ಸಹಪಾಠಿಗಳ ಪೋಷಕರಿಗೆ ಮಾರಾಟ ಮಾಡುತ್ತಿದ್ದುದು ಮಕ್ಕಳ ಪ್ರತಿಭೆಯನ್ನು ಎತ್ತಿ ತೋರಿಸುತ್ತಿತ್ತು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಇಂದಿರಾ, ಕಲಾ,ಪ್ರೇಮ, ಜಾನಕಿ, ಪದ್ಮಿನಿ, ಜನಾದರ್Àನ, ಸಹಶಿಕ್ಷಕಿಯರಾದ ದಿವ್ಯ, ಶಕೀಲ, ವನಜ, ಚಂದ್ರಶೇಖರ್ ಹಾಗೂ ಮಕ್ಕಳ ಪೋಷಕರು ಇದ್ದರು.