ಮಡಿಕೇರಿ, ಡಿ. 29: ಸರಕಾರಿ ಶಾಲೆಗಳು... ಸರಕಾರದ ಅಂಗನವಾಡಿ ಕೇಂದ್ರಗಳು ಎಂದರೆ ಸಾಕು ಈಗಿನ ಸಮಾಜದಲ್ಲಿ ಮೂಗು ಮುರಿಯುವವರೇ ಹೆಚ್ಚು. ಏನಿದ್ದರೂ ಈಗ ಎಲ್ಲದಕ್ಕೂ ಆಧುನಿಕತೆಯ ಸ್ಪರ್ಶ... ಥಳಕು ಬಳಕಿನ ಆಂಗ್ಲ ಮಾಧ್ಯಮ ಶಾಲೆಗಳು... ಬೇಬಿ ಸಿಟ್ಟಿಂಗ್ಗಳು... ಆಕರ್ಷಕ ನರ್ಸರಿಗಳೇ ಎಲ್ಲರಿಗೂ ಬೇಕು. ಸರಕಾರದ ಮೂಲಕ ಅದೆಷ್ಟೇ ಖರ್ಚು ಮಾಡಿ ಯೋಜನೆಗಳನ್ನು ಜಾರಿಗೆ ತಂದರೂ ಬಡತನದಲ್ಲಿರುವವರು ಕೂಡಾ ಸಂಕಷ್ಟದ ನಡುವೆಯೂ ಸರಕಾರಿ ಶಾಲೆ... ಅಂಗನವಾಡಿ ಕೇಂದ್ರಗಳತ್ತ ಹೆಚ್ಚು ಆಸಕ್ತಿ ತೋರಲಾರರು... ಹೀಗಾಗಿ ಸರಕಾರದ ಶಾಲೆ - ಅಂಗನವಾಡಿಗಳು ಕೇವಲ ಹೆಸರಿಗಷ್ಟೆ ಎಂಬ ಭಾವನೆ ಆವರಿಸಿಬಿಟ್ಟಿದೆ. ಇಂತಹ ಪರಿಸ್ಥಿತಿಯ ನಡುವೆ ಪುಟಾಣಿ ಮಕ್ಕಳು ತಮ್ಮ ಬದುಕಿನಲ್ಲಿ ಪೂರ್ವ ಶಿಕ್ಷಣ ಪಡೆಯುವ ಅಂಗನವಾಡಿ ಕೇಂದ್ರಗಳಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಮಡಿಕೇರಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಜವಾಬ್ದಾರಿ ಹೊಂದಿರುವ ಸಿಬ್ಬಂದಿಯೋರ್ವರ ಇಚ್ಚಾಶಕ್ತಿ, ಆಸಕ್ತಿಯ ಕೆಲಸದಿಂದಾಗಿ ತಾಲೂಕಿನ ಅಂಗನವಾಡಿಗಳಲ್ಲಿ ಹೊಸತನ ಕಂಡುಬರುತ್ತಿದೆ. ಇವರ ಪ್ರಯತ್ನಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಬಾಲವಿಕಾಸ ಸಮಿತಿ, ಜನಪ್ರತಿನಿಧಿಗಳು, ಗ್ರಾ.ಪಂ., ಸೇರಿದಂತೆ ಸಾರ್ವಜನಿಕರ ಸಹಕಾರ ದೊರೆಯುತ್ತಿದ್ದು, ಪ್ರಯತ್ನ ಸಫಲತೆ ಕಾಣುತ್ತಿದೆ.
ಮಡಿಕೇರಿ ತಾಲೂಕಿನ 10 ವೃತ್ತದ ಪೈಕಿ ಮಡಿಕೇರಿ ಕ.ಸ.ಬಾ., ಮೂರ್ನಾಡು, ಮರಗೋಡು, ಚೇರಂಬಾಣೆ ಈ ನಾಲ್ಕು ವೃತ್ತದ 91 ಅಂಗನವಾಡಿಗಳ ಜವಾಬ್ದಾರಿ ಹೊಂದಿರುವ ಮೇಲ್ವಿಚಾರಕಿ ಪ್ರಸ್ತುತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಪ್ರಬಾರ ಕರ್ತವ್ಯ ನಿರ್ವಹಿಸುತ್ತಿರುವ ಮೇಪಾಡಂಡ ಸವಿತಾ ಕೀರ್ತನ್ ಅವರು ಇದಕ್ಕೆ ನಾಂದಿ ಹಾಡಿದ್ದಾರೆ.
ಸರಕಾರದ ಈ ಕೇಂದ್ರವನ್ನು ಖಾಸಗಿ ಸಂಸ್ಥೆಗಳಂತೆ ಪರಿವರ್ತಿಸಿ ಮಕ್ಕಳು, ಪೋಷಕರನ್ನು ಆಕರ್ಷಿಸುವಂತೆ ಮಾಡುವ ಪರಿಕಲ್ಪನೆಯೊಂದಿಗೆ ಇವರು ಈ ಪ್ರಯತ್ನವನ್ನು 2015ರ ಸೆಪ್ಟೆಂಬರ್ನಿಂದ ಆರಂಭಿಸಿದರು.
ಹೊಸರೂಪಆರಂಭದಲ್ಲಿ ಇವರು ಕಾರ್ಯಕರ್ತೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ವಿಚಾರದ ಬಗ್ಗೆ ವಿವರಿಸಿದರು. ಇದಾದ ಬಳಿಕ ಬಾಲವಿಕಾಸ ಸಮಿತಿ, ಗ್ರಾ.ಪಂ. ಜನಪ್ರತಿನಿಧಿಗಳು, ಪೋಷಕರು, ಸ್ತ್ರೀಶಕ್ತಿ ಗುಂಪು, ಯುವಕ ಸಂಘ, ಸರಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು
ಸೇರಿಸಿ ಸಭೆ ಕರೆದು ತಮ್ಮ ಚಿಂತನೆಯನ್ನು ತಿಳಿಯಪಡಿಸುವ ಪ್ರಯತ್ನ ನಡೆಸಿದ್ದು ಬಹುತೇಕ ಸ್ಪಂದನ ದೊರೆತಿದೆ.
ಸರಕಾರದಿಂದ ಸಿಗುತ್ತಿರುವ ಸವಲತ್ತು- ಚಟುವಟಿಕೆಗಳ ಜತೆಗೆ ದಾನಿಗಳಿಂದ ಸ್ವ ಇಚ್ಚೆಯಂತೆ ಕೊಡುಗೆ ಪಡೆದ ಅಂಗನವಾಡಿ ಕೇಂದ್ರಗಳ ಪರಿಸರ, ಸೌಲಭ್ಯವನ್ನು ಉತ್ತಮಪಡಿಸಲಾಗುತ್ತಿದೆ. ಮಕ್ಕಳಿಗೆ ಸಮವಸ್ತ್ರ, ಕುರ್ಚಿ, ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಕುರಿತು ಇರುವ ಗೋಡೆ ಬರಹವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಚಿತ್ರಗಳನ್ನು ಒಳಗೊಂಡ ಗೋಡೆ ಬರಹ, ಕೇಂದ್ರದ ಒಳಾಂಗಣ ಅಡುಗೆ ಮನೆ, ಸ್ವಚ್ಛತೆಗೆ, ಕಪಾಟು (ರ್ಯಾಕ್), ಆಟಿಕೆ ಇಡಲು ವ್ಯವಸ್ಥೆ, ಮಕ್ಕಳಿಗೆ ಮಧ್ಯಾಹ್ನ ಮಲಗಲು ಹಾಸಿಗೆ ವ್ಯವಸ್ಥೆ ಕಲ್ಪಿಸುವದು ಇತ್ಯಾದಿ ಈ ಪ್ರಯತ್ನವಾಗಿದೆ. ಇದಕ್ಕೆ ಸಾಕಷ್ಟು ಮಂದಿಯಿಂದ ಸಹಕಾರ, ಕೊಡುಗೆ ದೊರೆತಿದ್ದು, ಕೇಂದ್ರಗಳಲ್ಲಿ ಹೊಸತನ ಕಾಣಬಹುದಾಗಿದೆ.
ಕೈತೋಟ : ಕೇಂದ್ರದ ಆವರಣದಲ್ಲಿ ಸ್ಥಳಾವಕಾಶ ಇರುವಲ್ಲಿ ಕೈತೋಟ ಮಾಡಿ ಸಾವಯವ ತರಕಾರಿ ಬೆಳೆಯುವದು, ಇದನ್ನು ಮಕ್ಕಳ ಊಟಕ್ಕೂ ಬಳಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಮಕ್ಕಳ ಪೋಷಕರಿಂದ ಒಂದೊಂದು ಪಾಟ್ (ಹೂಕುಂಡ) ಪಡೆದು ಇದರಲ್ಲಿ ಮಕ್ಕಳ ಹೆಸರು ಬರೆದು, ತರಕಾರಿ ನೆಟ್ಟು ಇದಕ್ಕೆ ಮಕ್ಕಳೇ ನೀರೆರೆದು ಪೋಷಿಸುವ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ಕಂಡುಬರುತ್ತಿದೆ. ಮಕ್ಕಳು ಉತ್ಸುಕತೆಯಿಂದ ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇವೆಲ್ಲದಕ್ಕೂ ಕಾರ್ಯಕರ್ತೆಯರೂ ಉತ್ಸಾಹದಿಂದ ಸಹಕರಿಸುತ್ತಿರುವದಾಗಿ ಸವಿತಾ ಅವರು ‘ಶಕ್ತಿ' ಭೇಟಿಯಿತ್ತ ಸಂದರ್ಭ ಪ್ರತ್ಯಕ್ಷವಾಗಿ ತೋರಿಸಿದರು. ಜಾಗದ ಕೊರತೆ ಇರುವಲ್ಲಿ ನೆಟ್ಹಾಕಿ ಅದರಲ್ಲಿ ಬೆಳೆಸುವ ಚಿಂತನೆ ಮಾಡಲಾಗಿದೆ ಎಂದು ಅವರು ಹೇಳಿದರು.
ನಿರುಪಯುಕ್ತ ವಸ್ತು ಬಳಕೆ
ಕಡಿಮೆ ವೆಚ್ಚದಲ್ಲಿ ಕಾರ್ಯಕರ್ತರು, ಪೋಷಕರು ಸೇರಿದಂತೆ ಯಾರಿಗೂ ಹೊರೆಯಾಗದಂತೆ ನಿರುಪಯುಕ್ತ ವಸ್ತು, ಕಡಿಮೆ ದರದ ವಸ್ತುವಿನ ಮೂಲಕ ವಿಷಯಾಧಾರಿತ ಪುಸ್ತಕದಲ್ಲಿರುವಂತೆ ಪೂರ್ವ ಶಿಕ್ಷಣಕ್ಕೆ ಬೇಕಾದ ವಸ್ತುಗಳು, ಉಪಕರಣ, ವಿಷಯ ಪರಿಚಯ ಚಿತ್ರ ತಯಾರಿಸಿ ಈಗಿರುವ ಚಟುವಟಿಕೆಯೊಂದಿಗೆ ಹೊಸತನದ ಮೂಲಕವೂ ಮಕ್ಕಳಿಗೆ ಪರಿಚಯಿಸಲಾಗುತ್ತಿದೆ.
‘ಫ್ಯಾಮಿಲಿ ಟ್ರೀ'
ಖಾಸಗಿ ಕಾನ್ವೆಂಟ್ಗಳ ಮಾದರಿಯಲ್ಲಿ ವಿದ್ಯಾರ್ಥಿ ಕುಟುಂಬ (ಮಕ್ಕಳು)ದ ಬಾಂಧವ್ಯ ಬೆಸೆಯಲು ಫ್ಯಾಮಿಲಿ ಟ್ರೀ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಎಲ್ಲಾ ಮಕ್ಕಳ ಭಾವಚಿತ್ರದೊಂದಿಗೆ ಅವರ ಜನ್ಮ ದಿನಾಂಕ, ಇತರ ವಿವರವನ್ನು ಸಂಗ್ರಹಿಸುವ ಪ್ರಯತ್ನ ಇದಾಗಿದೆ. ಇದರೊಂದಿಗೆ ಮಕ್ಕಳ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕೆಲವೆಡೆ ಮಕ್ಕಳಿಗೆ ಗುರುತಿನ ಚೀಟಿಯನ್ನೂ ಮಾಡಲಾಗಿದೆ. ಕಾನ್ವೆಂಟ್ಗಳ ಮಾದರಿಯಲ್ಲಿ ಮಕ್ಕಳ ಪ್ರತ್ಯೇಕ ಫೈಲ್ ಕೂಡ ಮಾಡಲಾಗುತ್ತಿದೆ. ದಾನಿಗಳು ನೀಡುವ ಹಣ, ಕೊಡುಗೆ, ಆಗುವ ಚಟುವಟಿಕೆ ಇತ್ಯಾದಿಗಳ ಜವಾಬ್ದಾರಿಯನ್ನು ಬಾಲವಿಕಾಸ ಸಮಿತಿಯ ಮೂಲಕ ನಿರ್ವಹಿಸಲಾಗುತ್ತಿದೆ. ಎಲ್ಲಾ ಕೇಂದ್ರಗಳಲ್ಲಿ ಈ ಪ್ರಯತ್ನ ಒಂದೇ ಬಾರಿಗೆ ಜಾರಿಯಾಗದಿದ್ದರೂ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದೆ. ಕೆಲವು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಸ್ಪರ್ಧಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಎಲ್ಲರಿಂದ ಸ್ಪಂದನ ಸಿಗುತ್ತಿದೆ. ರೋಟರಿಯಂತಹ ಸಂಸ್ಥೆಗಳಿಂದಲೂ ಸಹಕಾರ ಸಿಗುವಂತಾಗಿದೆ ಎಂದು ಸವಿತಾ ಹರ್ಷ ವ್ಯಕ್ತಪಡಿಸಿದರು.
ಮಕ್ಕಳ ದಿನಾಚರಣೆ
ಈ ಬಾರಿ ಮಕ್ಕಳ ದಿನಾಚರಣೆಯನ್ನು ಎರಡು ಕಡೆಗಳಲ್ಲಿ ಸಾಮೂಹಿಕವಾಗಿ ಆಚರಿಸಿರುವದು ಮತ್ತೊಂದು ವಿಶೇಷ. ಮಡಿಕೇರಿ ಕೊಡವ ಸಮಾಜದಲ್ಲಿ ಎರಡು ವೃತ್ತದ 52 ಕೇಂದ್ರ ಹಾಗೂ ಹಾಕತ್ತೂರಿನಲ್ಲಿ ಇನ್ನು ಎರಡು ವೃತ್ತದ 39 ಅಂಗನವಾಡಿ ಕೇಂದ್ರಗಳನ್ನು ಸೇರಿಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಮಕ್ಕಳ ದಿನಾಚರಣೆ ಆಚರಿಸಲಾಗಿದೆ. ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ನೃತ್ಯ, ಭಾಷಣ, ಕಾರ್ಯಕರ್ತೆಯರಿಗೂ ನೃತ್ಯ, ನಾಟಕದಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಶೇಷವಾಗಿ ಮಕ್ಕಳ ದಿನಾಚರಣೆ ಗಮನ ಸೆಳೆದಿದೆ.
ಈ ಕಾರ್ಯಕ್ರಮದ ವೇದಿಕೆ ಅಲಂಕಾರದೊಂದಿಗೆ ಪಾಲ್ಗೊಂಡಿದ್ದವರಿಗೆ ಪ್ರಮಾಣ ಪತ್ರವನ್ನು ಮೇಲ್ವಿಚಾರಕಿ ಸವಿತಾ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಪಿಸಿದ್ದು ಮಾದರಿಯಾಗಿದ್ದಾರೆ. ಪ್ರಸ್ತುತ 35 ಅಂಗನವಾಡಿಗಳಲ್ಲಿ ಸಮವಸ್ತ್ರ, 25 ಕಡೆ ತರಕಾರಿ ಕೈತೋಟ, 12 ಕಡೆ ಗೋಡೆ ಬರಹ, 25 ಕಡೆ ವೆಜಿಟೇಬಲ್ ಪಾಟ್ ಕಾರ್ಯಗತಗೊಂಡಿದೆ. ಈ ಬದಲಾವಣೆ ಎಲ್ಲಾ ಕಡೆಗಳಲ್ಲೂ ಆರಂಭವಾದಲ್ಲಿ ಸರಕಾರದ ಸೌಲಭ್ಯ ಮತ್ತಷ್ಟು ಸದುಪಯೋಗವಾಗಲಿದೆ.