ಮಡಿಕೇರಿ, ಸೆ. 27: ರಾಜ್ಯ ಸರ್ಕಾರ ನೂತನ ಜವಳಿ ನೀತಿ 2013-18 ನ್ನು ಜಾರಿಗೆ ತಂದಿದ್ದು, ಜವಳಿ ನೀತಿಯಡಿ 2016-17ನೇ ಸಾಲಿಗೆ “ಸೀವಿಂಗ್ ಮಷಿನ್ ಆಪರೇಟರ್”(ಯಾಂತ್ರೀಕೃತ ಹೊಲಿಗೆ ತರಬೇತಿ) ಹಾಗೂ ಕೈಮಗ್ಗ (ಹ್ಯಾಂಡ್‍ಲೂಮ್ ಟ್ರೈನಿಂಗ್) ತರಬೇತಿಯನ್ನು ಹಮ್ಮಿ ಕೊಳ್ಳಲಾಗಿದ್ದು, ಈ ತರಬೇತಿಯನ್ನು ಮಡಿಕೇರಿ, ಕುಶಾಲನಗರ, ಶನಿವಾರಸಂತೆ, ಗೋಣಿಕೊಪ್ಪ ವೀರಾಜಪೇಟೆ ಹಾಗೂ ಶಿರಂಗಾಲದಲ್ಲಿರುವ ಇಲಾಖೆಯಿಂದ ಅನುಮೋದನೆಯಾಗಿರುವ ತರಬೇತಿ ಕೇಂದ್ರಗಳಲ್ಲಿ ತರಬೇತಿಯನ್ನು ಪಡೆಯಲಿಚ್ಚಿಸುವ ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯ ರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೀವಿಂಗ್ ಮಷಿನ್ ಆಪರೇಟರ್ (ಎಸ್.ಎಂ.ಒ) ಹಾಗೂ ಕೈಮಗ್ಗ ತರಬೇತಿಯು 45 ದಿನಗಳ ಅವಧಿಯಾಗಿರುತ್ತದೆ. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು. 2016ರ ಸೆಪ್ಟೆಂಬರ್ 1 ಕ್ಕೆ 18 ರಿಂದ 35 ವರ್ಷದ ಒಳಪಟ್ಟಿದ್ದು ಸೂಕ್ತ ದಾಖಲೆಗಳನ್ನು ಒದಗಿಸತಕ್ಕದ್ದು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ನೀಡತಕ್ಕದ್ದು. ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಆದಾಯ ದೃಢೀಕರಣ ಪತ್ರ ನೀಡತಕ್ಕದ್ದು.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಪೂರ್ಣವಾದ ನಂತರ ರೂ. 3000 ದಂತೆ ಶಿಷ್ಯವೇತನವನ್ನು ನೀಡಲಾಗುವದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ. 100 ರಷ್ಟು ಸಿದ್ಧ ಉಡುಪು ತಯಾರಿಕಾ ಘಟಕ/ ಕೈಮಗ್ಗ ಉತ್ಪನ್ನಗಳ ಘಟಕಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುವದು. ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿರವರ ಕಚೇರಿಯಲ್ಲಿ ಪಡೆಯತಕ್ಕದ್ದು. ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿರುತ್ತದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.