ಮೂರ್ನಾಡು, ಸೆ. 30: ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ಕೊಡವ ಸಮಾಜದಲ್ಲಿ ನಡೆಯಿತು. ಸಂಘ 2015-16ನೇ ಸಾಲಿನಲ್ಲಿ ರೂ. 27.99 ಕೋಟಿ ವ್ಯವಹಾರ ನಡೆಸಿದ್ದು, ರೂ. 11.01 ಲಕ್ಷ ನಿವ್ವಳ ಲಾಭಗಳಿಸಿದೆ. 1722 ಮಂದಿ ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ ರೂ. 45,75,070 ಸಂಗ್ರಹವಾಗಿದೆ. ಈ ಪೈಕಿ ಸರ್ಕಾರದ ಪಾಲು ಬಂಡವಾಳ ರೂ. 60,000, ಸದಸ್ಯರಿಂದ ಸಂಗ್ರಹಗೊಂಡ ಠೇವಣಿ ಮೊತ್ತ ರೂ. 2,85,20,000 ಇದ್ದು, ಸಂಘದ ಆಡಿಟ್ ವರ್ಗೀಕರಣ ಬಿ ತರಗತಿಯಲಿದೆ. ಸದಸ್ಯರಿಗೆ ಶೇ. 10 ರಂತೆ ಡಿವಿಡೆಂಟ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಮೂಲಕ ಗೊಬ್ಬರ ವ್ಯವಹಾರ ರೂ. 75,35,000 ಲಕ್ಷ, ಆಭರಣ, ಜಾಮೀನು, ಎಸ್.ಹೆಚ್, ಜೆಎಲ್‍ಜಿ ಹಾಗೂ ಕೆಡಿಸಿಸಿ ಸಾಲದ ರೂಪದಲ್ಲಿ ರೂ. 5,67,82 ಲಕ್ಷ ಸಾಲ ನೀಡಲಾಗಿದೆ. ಸದಸ್ಯರುಗಳಿಂದ ಶೇ. 100 ರಷ್ಟು ಸಾಲ ಮರುಪಾವತಿ ಯಾಗಿದ್ದು, ಕೆಡಿಸಿಸಿ ಬ್ಯಾಂಕ್‍ನಿಂದ ಪಡೆದ ಸಾಲವನ್ನು ಶೇ. 100 ರಂತೆ ಮರುಪಾವತಿಸ ಲಾಗಿದೆ. ಸಂಘದ ನೂತನ ಕಚೇರಿ ಹಾಗೂ ಭದ್ರತಾ ಕೊಠಡಿಯನ್ನು ರೂ. 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮುಂದಿನ ತಿಂಗಳಿನಲ್ಲಿ ನೂತನ ಕಚೇರಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಕೆ. ಅಪ್ಪಯ್ಯ, ನಿರ್ದೇಶಕರುಗಳಾದ ಎನ್.ಎನ್. ದೇವಯ್ಯ, ಕೆ.ಪಿ. ಕಾವೇರಪ್ಪ, ಸಿ.ಕೆ. ಪಳಂಗಪ್ಪ, ಟಿ.ಆರ್. ಪುರುಷೋತ್ತಮ್, ಎ.ಎಲ್. ಭವಾನಿ, ಸಿ.ಜೆ. ಶ್ಯಾಮಲ, ಹೆಚ್.ಎ. ಹರೀಶ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಕೆ.ಎ. ಚೋಂದಕ್ಕಿ ಇನ್ನಿತರರು ಹಾಜರಿದ್ದರು.