ಮಡಿಕೇರಿ, ಡಿ. 4: ಹೊದ್ದೂರು-ಪಾಲೆಮಾಡು ಗ್ರಾಮದ ಸ್ಮಶಾನ ಜಾಗ ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳಿದ್ದರೂ ಸ್ಥಳ ಪರಿಶೀಲನೆ ನಡೆಸದೆ ಮತ್ತು ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ದಲಿತ ಸಂಘರ್ಷ ಸಮಿತಿಯ ವಿಭಾಗಿಯ ಸಂಚಾಲಕನೆಂದು ಹೇಳಿಕೊಳ್ಳುತ್ತಿರುವ ಹೆಚ್.ಎಸ್. ಕೃಷ್ಣಪ್ಪ ರಾಜಕೀಯ ಒತ್ತಡಕ್ಕೆ ಮಣಿದು ಇಲ್ಲಸಲ್ಲದ ಹೇಳಿಕೆ ನೀಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಬಹುಜನ ಕಾರ್ಮಿಕ ಸಂಘ ಹಾಗೂ ಬಹುಜನ ಸಮಾಜ ಪಕ್ಷ ಆರೋಪಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ, ಹೊದ್ದೂರು-ಪಾಲೆಮಾಡು ಗ್ರಾಮ ವ್ಯಾಪ್ತಿಯಲ್ಲಿರುವ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಕೃಷ್ಣಪ್ಪ ಅವರು ಮಾಡುತ್ತಿರುವ ಆರೋಪ ರಾಜಕೀಯ ಪ್ರೇರಿತವೆಂದು ಅಸಮಾಧಾನ ವ್ಯಕ್ತಪಡಿಸಿದರು. 2009-10 ರಲ್ಲಿ ಹೊದ್ದೂರು ಪಾಲೆಮಾಡು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಇತರರಿಗಾಗಿ ತಲಾ ಎರಡು ಎಕರೆಯಂತೆ ಒಟ್ಟು 4 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕೃಷ್ಣಪ್ಪ ದಲಿತರ ಯಾವದೇ ನೋವಿಗೆ ಸ್ಪಂದಿಸದೆ ಇದೀಗ ದಿಢೀರ್ ಆಗಿ ಪ್ರತ್ಯಕ್ಷರಾಗಿ ಬಡವರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ ಎಂದು ಮೊಣ್ಣಪ್ಪ ಟೀಕಿಸಿದರು. ದಲಿತರ ಹಾದಿ ತಪ್ಪಿಸುತ್ತಿರುವ ಕೃಷ್ಣಪ್ಪ ಹಾಗೂ ಅವರ ಬೆಂಬಲಿಗರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಈ ಎಲ್ಲಾ ಗೊಂದಲಗಳಿಗೆ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಂದಾಯ ನಿರೀಕ್ಷಕರ ಕರ್ತವ್ಯ ಲೋಪವೇ ಕಾರಣವೆಂದು ಆರೋಪಿಸಿದರು. ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ 12.70 ಎಕರೆ ಜಾಗವನ್ನು ಮೀಸಲಿಡಲಾಗಿದ್ದು, ಸ್ಮಶಾನದ ಜಾಗವನ್ನು ಸೇರಿಸಿಕೊಂಡು ಬೇಲಿ ಹಾಕಲಾಗಿದೆ. ಮುಂದಿನ ಎರಡು ದಿನಗಳ ಒಳಗಾಗಿ ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಿಸಿರುವ ಸ್ಮಶಾನದ ಜಾಗವನ್ನು ತೆರವು ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ರೂಪಿಸುವದಾಗಿ ಎಚ್ಚರಿಕೆ ನೀಡಿದರು. ಸ್ಮಶಾನಕ್ಕೆ ಪರ್ಯಾಯ ಜಾಗ ಬೇಡವೆಂದು ಸ್ಪಷ್ಟಪಡಿಸಿರುವ ಮೊಣ್ಣಪ್ಪ ಇತರರು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಿ ಎಂದು ಒತ್ತಾಯಿಸಿದರು. ಕ್ರೀಡಾಂಗ ಣದ ಜಾಗವನ್ನು ಗುರುತಿಸುವ ಸಂದರ್ಭ ಅಧಿಕಾರಿಗಳು ಸರಕಾರದ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಸ್ಥಳೀಯ ನಿವಾಸಿಗಳಿಂದ ಹಣ ಪಡೆದಿರುವದಾಗಿ ಕೃಷ್ಣಪ್ಪ ತನ್ನ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದ್ದು, ತನಿಖೆಯನ್ನು ಎದುರಿಸಲು ತಾವು ಸಿದ್ಧವೆಂದು ಮೊಣ್ಣಪ್ಪ ಸ್ಪಷ್ಟಪಡಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ, ಹೊದ್ದೂರು-ಪಾಲೇಮಾಡು ವ್ಯಾಪ್ತಿಯಲ್ಲಿ ದಲಿತರು, ಕಡುಬಡವರು ಹಾಗೂ ಅಲ್ಪಸಂಖ್ಯಾತರ 350 ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಈ ಪ್ರದೇಶಕ್ಕೆ ಕಾನ್ಶಿರಾಂ ನಗರ ಎಂದು ಹೆಸರಿಟ್ಟಿರುವದೇ ಇಷ್ಟೆಲ್ಲಾ ಗೊಂದಲ ಸೃಷ್ಟಿ ಮತ್ತು ರಾಜಕೀಯ ದ್ವೇಷಕ್ಕೆ ಕಾರಣವೆಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದು, ಕೆಲವು ವ್ಯಕ್ತಿಗಳ ಮೂಲಕ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕ್ರೀಡಾಂಗಣ ನಿರ್ಮಾಣಕ್ಕೆ ಯಾವದೇ ರೀತಿಯ ಅಭ್ಯಂತರವಿಲ್ಲ, ಆದರೆ ಈ ಪ್ರದೇಶದಲ್ಲಿ ಉಳ್ಳವರಿಂದ ಒತ್ತುವರಿಯಾಗಿರುವ 119 ಎಕರೆ ಜಾಗವನ್ನು ತೆರವುಗೊಳಿಸಿ ಸರಕಾರ ಸ್ವಾಧೀನಕ್ಕೆ ಪಡೆಯುವ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿ ಎಂದು ಪ್ರೇಮ್ ಒತ್ತಾಯಿಸಿದರು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಸ್ಮಶಾನದ ಜಾಗವನ್ನು ಯಥಾಸ್ಥಿತಿ ಕಾಯ್ದುಕೊಳ್ಳದಿದ್ದಲ್ಲಿ ತಾ. 9 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಜಯಪ್ಪ ಹಾನಗಲ್ ಮಾತನಾಡಿ, ಹೊಟ್ಟೆಪಾಡಿನ ಕೆಲವು ಸಂಘಟನೆಗಳು ಬಡವರ ಪರ ಹೋರಾಟ ನಡೆಸುತ್ತಿರುವ ಸಂಘಟನೆಗಳನ್ನು ದಮನ ಮಾಡುವ ಕಾರ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು. ಸಾಕ್ಷ್ಯಾಧಾರ ಸಹಿತ ಆರೋಪಗಳನ್ನು ಮಾಡಬೇಕೆ ಹೊರತು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಹೇಳಿಕೆ ನೀಡಬಾರದೆಂದು ಅವರು ಒತ್ತಾಯಿಸಿದರು.

ಸ್ಥಳೀಯ ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, ಬಹುಜನ ಕಾರ್ಮಿಕ ಸಂಘದ ಹೋರಾಟ ನ್ಯಾಯಯುತವಾಗಿದ್ದು, ಕೆಲವು ವ್ಯಕ್ತಿಗಳು ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಕಿರಣ್ ಜಗದೀಶ್ ಹಾಗೂ ಪೂವಣಿ ಉಪಸ್ಥಿತರಿದ್ದರು.