ಸೋಮವಾರಪೇಟೆ, ಅ. 26: ಹೈಟೆಕ್ ಆಮಿಷಗಳಿಗೆ ಬಲಿಯಾದವರು ಜಿಲ್ಲೆಯಲ್ಲೂ ಅನೇಕರಿದ್ದು, ತಾ. 24ರಂದು ‘ಶಕ್ತಿ’ಯಲ್ಲಿ ಇಂತಹ ಒಂದು ವರದಿ ಪ್ರಕಟವಾದ ನಂತರ ಹಲವರು ಇದೇ ರೀತಿಯಲ್ಲಿ ಮೋಸ ಹೋಗಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.ಸೋಮವಾರಪೇಟೆಯ ಕರ್ಕಳ್ಳಿ ನಿವಾಸಿ ರೀಟಾ ಅವರು ಇದೇ ರೀತಿಯ ಮೋಸದ ಜಾಲಕ್ಕೆ ಬಲಿಯಾಗಿ ರೂ.1.20 ಲಕ್ಷ ಕಳೆದುಕೊಂಡರು. ಇನ್ನೂ 79 ಸಾವಿರಕ್ಕೆ ಅತ್ತಲಿಂದ ಬೇಡಿಕೆ ಬಂದಾಗ ಸಂಶಯಗೊಂಡು ಪತ್ರಿಕೆಯ ಗಮನಕ್ಕೆ ತಂದರು. ನಂತರ ಪೊಲೀಸ್ ದೂರು ನೀಡಲಾಯಿತು. ತನಿಖೆ ನಡೆಯುತ್ತಿದೆ.
ಈ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲೆಯ ಹಲವರು ಇಂತಹದೇ ಮೋಸದ ಜಾಲಕ್ಕೆ ಬಲಿಯಾಗಿರುವ ಮಾಹಿತಿಗಳು ಲಭಿಸುತ್ತಿವೆ. ಕೆಲವರು ಅವಮಾನವಾಗುತ್ತದೆ ಎಂದು ಹೆಸರು ಹೇಳಲು ಹಿಂದೇಟು ಹಾಕಿದರೆ, ಇನ್ನು ಕೆಲವರು ಇಂತಹ ಮೋಸ ಜಾಲವನ್ನು ಬುಡಸಹಿತ ಕಿತ್ತೆಸೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೊನ್ನಂಪೇಟೆಯ ವ್ಯಕ್ತಿಯೋರ್ವರಿಗೆ ಫೇಸ್‍ಬುಕ್‍ನಲ್ಲೇ ಪರಿಚಯನಾದ ಜೋಸೆಫ್ ಎಂಬಾತ ಇವರ ಕೌಟುಂಬಿಕ ಹಿನ್ನೆಲೆಯನ್ನು ಅವರಿಂದಲೇ ತಿಳಿದುಕೊಳ್ಳುವ ಮೂಲಕ ಅತ್ಯಂತ ಆತ್ಮೀಯನಂತೆ ವರ್ತಿಸಿದ್ದಾನೆ. ಈತನ ಆತ್ಮೀಯತೆಯನ್ನು ನಂಬಿದ ಪೊನ್ನಂಪೇಟೆಯ ವ್ಯಕ್ತಿ, ತನ್ನ ಪತ್ನಿಗೆ ಸೊಂಟ ನೋವಿದ್ದು, ಸಾವಿರಾರು ರೂಪಾಯಿ ಖರ್ಚಾದರೂ ಇನ್ನೂ ಗುಣಮುಖವಾಗಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ ಎಂದು ಹೇಳಿದ್ದಾರೆ ಎಂಬ ವಿಷಯವನ್ನು ಜೋಸೆಫ್‍ನೊಂದಿಗೆ ಹಂಚಿಕೊಂಡಿದ್ದಾರೆ.
ತಕ್ಷಣ ಈತ ತಾನು ಲಂಡನ್‍ನಲ್ಲಿದ್ದು, ನಿಮ್ಮ ಪತ್ನಿಯ ಸೊಂಟದ ಶಸ್ತ್ರ ಚಿಕಿತ್ಸೆಗೆ ಹಣ ನೀಡುತ್ತೇನೆ. ಲಂಡನ್‍ನಲ್ಲಿ 8 ಲಕ್ಷದಷ್ಟು ಕರೆನ್ಸಿ ಕಳುಹಿಸುತ್ತೇನೆ. ದೆಹಲಿ ಏರ್‍ಪೋರ್ಟ್‍ನಿಂದ ಬಿಡಿಸಿಕೊಳ್ಳಿ ಎಂದಿದ್ದಾನೆ.
ಇದಾದ ಕೆಲ ದಿನಗಳ ನಂತರ ಇವರ ಮೊಬೈಲ್‍ಗೆ ಕರೆ ಮಾಡಿದ ಮಹಿಳೆಯೋರ್ವರು ತಾನು ದೆಹಲಿ ವಿಮಾನ ನಿಲ್ದಾಣದ ಪಾರ್ಸೆಲ್ ಸರ್ವಿಸ್ ಕಂಪೆನಿಯಿಂದ ಮಾತನಾಡುತ್ತಿದ್ದು, ನಿಮ್ಮ ವಿಳಾಸಕ್ಕೆ ಲಂಡನ್‍ನಿಂದ ಪಾರ್ಸೆಲ್ ಬಂದಿದೆ. ಅದರೊಳಗೆ ಲಕ್ಷಾಂತರ ಕರೆನ್ಸಿ, ಚಿನ್ನಾಭರಣ, ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ ಬೆಲೆಬಾಳುವ ವಸ್ತುಗಳಿವೆ. ಏರ್‍ಪೋರ್ಟ್‍ನಲ್ಲಿ ಸಿಬಿಐ ನವರು ನಿಮಗೆ ಕಳುಹಿಸಿದ ಪಾರ್ಸೆಲ್ ಅನ್ನು ಹಿಡಿದಿಟ್ಟುಕೊಂಡಿದ್ದಾರೆ. ತಕ್ಷಣ ನಾನು ಕಳುಹಿಸುವ ಅಕೌಂಟ್ ನಂಬರ್‍ಗೆ 1.70 ಲಕ್ಷ ಹಣ ಕಳುಹಿಸಿ, ನಂತರ ಏರ್‍ಪೋರ್ಟ್‍ನಿಂದ ನಿಮ್ಮ ಪಾರ್ಸೆಲ್ ಬಿಡಿಸಿಕೊಂಡು ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡುತ್ತೇನೆ. ಲಂಡನ್‍ನಲ್ಲಿನ ಮೌಲ್ಯ 8ಲಕ್ಷ, ಭಾರತದಲ್ಲಿ ಈ ಕರೆನ್ಸಿಯ ಮೌಲ್ಯ ಇನ್ನೂ ಅಧಿಕವಿರಬಹುದು ಎಂದೆಲ್ಲಾ ಪುಂಗಿ ಊದಿದ್ದಾಳೆ.
ಈ ಪುಂಗಿಗೆ ತಲೆಯಾಡಿಸಿದ ಪೊನ್ನಂಪೇಟೆಯ ವ್ಯಕ್ತಿ, ಸಿಬಿಐ ಹೆಸರು ಹೇಳುತ್ತಲೇ ಭಯಗೊಂಡು ತಕ್ಷಣ ಕಾರ್ಪೋರೇಷನ್ ಬ್ಯಾಂಕ್ ಮೂಲಕ ಆಕೆ ಕಳುಹಿಸಿದ ಅಕೌಂಟ್‍ಗೆ ಅವರಿವರಿಂದ ಸಾಲ ಮಾಡಿ 1.70 ಲಕ್ಷ ಹಣ ಸಂದಾಯ ಮಾಡಿದ್ದಾರೆ.
ಹಣ ಸಂದಾಯ ಆಗುತ್ತಲೇ ಜೋಸೆಫ್‍ನ ಫೇಸ್‍ಬುಕ್ ಅಕೌಂಟ್ ಬಂದ್ ಆದರೆ, ಮಹಿಳೆ ಕರೆ ಮಾಡಿದ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಭಯಗೊಂಡು ಕಾರ್ಪೋರೇಷನ್ ಬ್ಯಾಂಕ್‍ಗೆ ತೆರಳಿ ಪರಿಶೀಲನೆ ನಡೆಸಿದಾಗ, ಆಕೆ ನೀಡಿದ ಅಕೌಂಟ್ ನಂಬರ್ ನಾಗಾಲ್ಯಾಂಡ್‍ಗೆ ಸೇರಿದ್ದಾಗಿ ತಿಳಿದುಬಂದಿದೆ.
ಪತ್ನಿಯ ಸೊಂಟ ನೋವಿನ ನೆಪದಲ್ಲಿ ಅನಾಮಿಕ ವ್ಯಕ್ತಿಯೋರ್ವ ಕುಳಿತಲ್ಲಿಯೇ 1.70 ಲಕ್ಷ ಹಣ ಗಳಿಸಿದ್ದಾನೆ. ಬಣ್ಣದ ಮಾತಿಗೆ ಮರುಳಾಗಿ ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ ಇದೀಗ ಸಾಲ ತೀರಿಸಲು ಹೆಣಗಾಡುತ್ತಿದ್ದಾರೆ. ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಿದ್ದು, ಜನತೆ ಮಾತ್ರ ಜಾಗೃತರಾದಂತೆ ಕಂಡುಬರುತ್ತಿಲ್ಲ.
ಅಂದ ಹಾಗೆ ವೀರಾಜ ಪೇಟೆಯ ಮುಸ್ಲಿಂ ಮಹಿಳೆ ಯೋರ್ವರು ಇಂತಹ ಆಮಿಷಕ್ಕೆ ಬಲಿಯಾಗಿ ಬರೋಬ್ಬರಿ 8 ಲಕ್ಷ ಕಳೆದುಕೊಂಡಿದ್ದಾರೆ. ನಿಮಗೂ ಹೈಟೆಕ್ ಉಡುಗೊರೆಯ ಕರೆ ಬರಬಹುದು..ಎಚ್ಚೆತ್ತರೆ ಉಳಿಸುವಿರಿ-ಯಾಮಾರಿದರೆ ಕಳೆಯುವಿರಿ. ಒಟ್ಟಾರೆ ಎಚ್ಚರದಿಂದಿರಿ!
- ವಿಜಯ್ ಹಾನಗಲ್