ಮಡಿಕೇರಿ, ಅ. 26: ‘ಹೇಳುವದು ಒಂದು.., ಮಾಡುವದು ಇನ್ನೊಂದು..’ ಈ ಹಾಡಿನ ಸಾಲು ಮಡಿಕೇರಿ ನಗರಸಭೆಗೆ ಅಕ್ಷರಶ ಅನ್ವಯಿಸುತ್ತದೆ. ಒಂದೊಮ್ಮೆ ಮೈದಾನಗಳಲ್ಲಿ ಯಾವದೇ ವಸ್ತು ಪ್ರದರ್ಶನ, ವಾಹನ ನಿಲುಗಡೆಗೆ ಅವಕಾಶ ನೀಡುವದಿಲ್ಲವೆಂದು ಘಂಟಾಘೋಷವಾಗಿ ಹೇಳುವದು.., ನಂತರ ಯಾರ ಅರಿವಿಗೂ ಬಾರದೆ ಮೈದಾನವನ್ನು ಹಂಚಿ ಬಿಡುವದು.ಮಕ್ಕಳಿಗೆ, ಕ್ರೀಡಾಪಟುಗಳಿಗೆ ಆಟದ ಮೈದಾನವಾಗಿರುವ ಗಾಂಧಿ ಮೈದಾನ ನಗರಸಭೆಗೆ ‘ಆಟಿಕೆ’ಯ ವಸ್ತುವಾಗಿದೆ. ನಗರ ವ್ಯಾಪ್ತಿಯಲ್ಲಿರುವ ಆಟದ ಮೈದಾನಗಳಲ್ಲಿ ಗಾಂಧಿ ಮೈದಾನ ಕೂಡ ಒಂದಾಗಿದೆ. ಸಂತ ಮೈಕಲರ ಶಾಲೆಯ ಮಕ್ಕಳು, ಸಂಘ-ಸಂಸ್ಥೆಗಳು, ವಿಶೇಷಚೇತನರ ಇಲಾಖೆ ಸೇರಿದಂತೆ ಇತರ ಸರಕಾರಿ ಇಲಾಖೆಗಳು ಕೂಡ ಈ ಮೈದಾನವನ್ನು ಕ್ರೀಡಾಕೂಟಗಳಿಗೆ ಬಳಸಿಕೊಳ್ಳುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಂಜೆ ಇಲ್ಲಿ ಕ್ರೀಡಾಪಟುಗಳು, ಕ್ರಿಕೆಟ್, ಫುಟ್ಬಾಲ್ ಆಟ ಆಡುತ್ತಾರೆ. ಆದರೆ ಇದರ ನಿರ್ವಹಣೆಯ ಹೊಣೆ ಹೊತ್ತಿರುವ ನಗರಸಭೆ ಮಾತ್ರ ಮೈದಾನವನ್ನು ಮಾರಾಟಕ್ಕೆ ಇಟ್ಟಂತಿದೆ. ಮಳೆಗಾಲದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ಅವಕಾಶ ನೀಡಿ ಮೈದಾನ ಕೆಸರುಮಯವಾಗಿದ್ದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳ, ನಗರಸಭಾ ಸದಸ್ಯರ ಒತ್ತಾಯದಿಂದಾಗಿ ಮೈದಾನದ ರಕ್ಷಣೆಗೆ ನಗರಸಭೆ ಮುಂದಾಗಿತ್ತು.

ಆವರಣ ಬೇಲಿ

ಮೈದಾನದ ರಕ್ಷಣೆಯ ಸಲುವಾಗಿ ಮೈದಾನದ ರಸ್ತೆ ಬದಿಯುದ್ದಕ್ಕೂ ಕಬ್ಬಿಣದ ಆವರಣ ಬೇಲಿ ಅಳವಡಿಸಲಾಗಿದೆ. ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ಆವರಣ ಬೇಲಿ ಹಾಗೂ ಗಾಂಧಿ ಪ್ರತಿಮೆ ಎದುರು ಉದ್ಯಾನ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ. ಮೈದಾನದೊಳಗೆ ಯಾವದೇ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಕ್ರಮಕೈಗೊಳ್ಳಲಾಗಿತ್ತು. ಅಲ್ಲಿ ಯಾವದೇ ವಸ್ತು ಪ್ರದರ್ಶನ, ಇನ್ನಿತರ ಚಟುವಟಿಕೆಗೆ ಅವಕಾಶ ನೀಡದಂತೆ ತೀರ್ಮಾನ ಕೈಗೊಳ್ಳಲಾಗಿತ್ತು.

ಆದರೆ ಇದೀಗ ದಿಢೀರನೇ ಮೈದಾನದಲ್ಲಿ ವಸ್ತು ಪ್ರದರ್ಶನಕ್ಕೆ ಬೃಹತ್ ಪೆಂಡಾಲ್ ತಲೆ ಎತ್ತುತ್ತಿದೆ. ಪೆಂಡಾಲ್ ಹಾಕುತ್ತಿರುವವರನ್ನು ವಿಚಾರಿಸಿದರೆ, ನಗರಸಭೆಯಿಂದ ಅನುಮತಿ ಪಡೆದಿರುವದಾಗಿ ಹೇಳುತ್ತಿದ್ದಾರೆ. ಆದರೆ ನಗರಸಭೆಯಿಂದ ಯಾವದೇ ಅನುಮತಿ ನೀಡಿಲ್ಲವೆಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೆ ಅನುಮತಿ ನೀಡಿದವರಾರು ಎಂಬದೇ ಪ್ರಶ್ನೆ?

ಅನಧಿಕೃತ ವ್ಯವಹಾರ

ಪೆಂಡಾಲ್ ಹಾಕಲು ಅನುಮತಿ ಕೋರಿ ನಗರಸಭೆಗೆ ಅರ್ಜಿ ಸಲ್ಲಿಕೆಯಾಗಿದೆ. ಆದರೆ ನಗರಸಭೆಯಿಂದ ಯಾವದೇ ಅನುಮತಿ ಪತ್ರ ನೀಡಿಲ್ಲ. ಅಧ್ಯಕ್ಷರು ಹಾಗೂ ಆಯುಕ್ತರು ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ನಿಲುವು ತಳೆದಿದ್ದಾರೆ. ಆದರೆ ದಿಢೀರಾಗಿ ಮೈದಾನದಲ್ಲಿ ಪೆಂಡಾಲ್ ತಲೆ ಎತ್ತುತ್ತಿರುವದು ಮಾತ್ರ ವಿಚಿತ್ರ ಸಂಗತಿಯಾಗಿದೆ.

ನಗರಸಭೆ ಅಧ್ಯಕ್ಷರ, ಸದಸ್ಯರುಗಳು, ಆಯುಕ್ತರ ಗಮನಕ್ಕೆ ಬಾರದೆ ಯಾರೋ ಮೈದಾನವನ್ನು ಗುತ್ತಿಗೆ ನೀಡಿದ್ದಾರೆ. ಮೈದಾನ ರಕ್ಷಣೆ ಮಾಡಬೇಕು, ಅಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದೆಂದು ಸಭೆಯಲ್ಲಿ ಬೊಬ್ಬೆ ಹೊಡೆದು ನಿರ್ಣಯ ಕೈಗೊಳ್ಳಲು ಆಗ್ರಹಿಸಿದವರೇ ಈಗ ಈ ಮೈದಾನವನ್ನು ಗುಟ್ಟಾಗಿ ಬೆಂಗಳೂರಿನವರಿಗೆ ವಸ್ತು ಪ್ರದರ್ಶನಕ್ಕೆ ನೀಡಿರುವದು ಮಾತ್ರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಹೀಗೆ ಆದರೆ ಹೇಗೆ...?

ಕೊಡಗು ಅಂದರೆ ಎಲ್ಲರಿಗೂ ಒಂದು ರೀತಿಯ ತಾತ್ಸಾರ ಮನೋಭಾವ.., ಇಲ್ಲಿ ಯಾರು, ಏನೂ ಬೇಕಾದರೂ ಮಾಡಬಹುದೆಂಬ ಅನಿಸಿಕೆ. ಯಾರೋ ಬಂದು ಯಾವದೇ ಅನುಮತಿ ಇಲ್ಲದೆ ಪೆಂಡಾಲ್ ಹಾಕುವದು, ಬೇಲಿ ಹಾಕುವದು, ಕಟ್ಟಡ ಕಟ್ಟುತ್ತಿರುವದು ಸಾಮಾನ್ಯವಾಗಿದೆ. ಹೀಗೆ ಆದರೆ ಹೇಗೆ ಎಂಬದೇ ಪ್ರಶ್ನೆ...?

ಕ್ರೀಡಾಪಟುಗಳ ಆಕ್ರೋಶ

ಸಾಮಾನ್ಯವಾಗಿ ರಂಗಮಂದಿರದ ಬಳಿ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಗಾಂಧಿ ಪ್ರತಿಮೆ ಬಳಿಯೇ ಪೆಂಡಾಲ್ ಹಾಕಲಾಗುತ್ತಿದೆ. ಅದೂ ಅಲ್ಲದೆ ಶಾಲೆಯ ಎದುರಿನಲ್ಲೇ ‘ಸಂತೆ’ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕ್ರೀಡಾ ಪ್ರೇಮಿಗಳು ನಗರಸಭೆಯ ವರ್ತನೆಯನ್ನು ಖಂಡಿಸಿದ್ದಾರೆ. ಆಟವಾಡಲು ಇರುವ ಮೈದಾನವನ್ನು ಈ ರೀತಿ ಹಾಳುಗೆಡಹಿದರೆ ಮಕ್ಕಳು ಆಟವಾಡುವದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ತಾ. 27 ರಂದು (ಇಂದು) ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಮೈದಾನವನ್ನು ಕ್ರೀಡಾಕೂಟಕ್ಕೆ ಹೊರತುಪಡಿಸಿ ಇತರ ಚಟುವಟಿಕೆಗೆ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಕ್ರೀಡಾ ಜಿಲ್ಲೆ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಕ್ರೀಡಾ ಮೈದಾನಗಳನ್ನೇ ನಾಶ ಮಾಡುತ್ತಾ ಹೋದರೆ ಮುಂದೆ ಕ್ರೀಡಾಪಟುಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರುವದಂತೂ ದಿಟ...! -ಸಂತೋಷ್