ಆಲೂರುಸಿದ್ದಾಪುರ, ಆ. 11: ಹೆಚ್ಚುತ್ತಿರುವ ವಾಹನ ಅಪಘಾತ ಪ್ರಕರಣ ಹಾಗೂ ಪರವಾನಿಗೆ ರಹಿತ ಮತ್ತು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಲಾವಣೆಗೆ ಕಡಿವಾಣ ಹಾಕಲು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ತಂಡ ಇಂದು ನಗರದಲ್ಲಿ ದ್ವಿಚಕ್ರ ವಾಹನಗಳನ್ನು ತಡೆÀದು ದಾಖಲೆಗಳನ್ನು ಪರಿಶಿಲಿಸಿದರು.

ಅನೇಕ ವಾಹನ ಸವಾರರಲ್ಲಿ ಪರವಾನಿಗೆ ಇಲ್ಲದಿದ್ದರೆ ಕೆಲ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳೇ ಇರಲಿಲ್ಲ. ಇನ್ನು ಅನೇಕರು ವಿಪರೀತ ಶಬ್ದ ಮಾಡುತ್ತ, ಹೆಲ್ಮೆಟ್ ಧರಿಸದೆ ನಗರದಲ್ಲಿ ಸುತ್ತಾಡುತ್ತಿದ್ದರು. ಅನೇಕರು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದರು. ಹೆಚ್ಚಿನದಾಗಿ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೆ ಪರವಾನಿಗೆ ರಹಿತವಾಗಿ ಸುತ್ತಾಡುತ್ತಿದ್ದರು. ಇವುಗಳಿಗೆಲ್ಲ ಇಂದಿನಿಂದ ಕಡಿವಾಣ ಬಿದ್ದಂತಾಗಿದೆ.

ಕೆಲವು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ವ್ಯಾಪ್ತಿಯಲ್ಲಿ ಎಲ್ಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತ ಪಾದಚಾರಿಗಳಿಗೆ ತೊಂದರೆ ನೀಡುವದರ ಜೊತೆಗೆ ಇತರ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿ ಸರ್ವೇ ಸಾಮಾನ್ಯವಾಗಿತ್ತು. ಇವುಗಳನ್ನು ಮನಗಂಡ ಇಲ್ಲಿಯ ಪೊಲೀಸ್ ಠಾಣಾಧಿಕಾರಿಯನ್ನೊಳಗೊಂಡ ತಂಡ ಇದಕ್ಕಾಗಿ ಇಂದು ದ್ವಿಚಕ್ರ ವಾಹನಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ದಾಖಲೆಗಳು ಇಲ್ಲದೆ ಇರುವಂತಹ ವಾಹನಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಇದನ್ನರಿತ ಅನೇಕ ದ್ವಿಚಕ್ರ ಸವಾರರು ಹೆಚ್ಚಾಗಿ ನಗರದತ್ತ ಸುಳಿಯಲೇ ಇಲ್ಲ. ಮುಂದೆಯು ಈ ಪ್ರಕ್ರಿಯೆಯನ್ನು ಮುಂದುವರೆಸಿದಲ್ಲಿ ಈ ಹಿಂದೆ ಆಗುತ್ತಿದ್ದ ಅಪಘಾತ ಪ್ರಕರಣಗಳು ಹಾಗೂ ವೇಗವಾಗಿ ಚಲಾಯಿಸುವ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಇಲ್ಲಿಯ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

-ದಿನೇಶ್ ಮಾಲಂಬಿ