ಕೂಡಿಗೆ, ಡಿ. 1: ಇಲ್ಲಿಗೆ ಸಮೀಪದ ಹೆಬ್ಬಾಲೆ ಬನಶಂಕರಿ ದೇವಾಲಯ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸೋಮವಾರಪೇಟೆ, ಸ್ತ್ರೀ ಶಕ್ತಿ ಯೋಜನೆ ಇವರ ಆಶಯದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವು ಹೆಬ್ಬಾಲೆಯ ಬನಶಂಕರಿ ಅಮ್ಮನ ಹಬ್ಬ ಮತ್ತು ಜಾತ್ರೋತ್ಸವದ ಅಂಗವಾಗಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್. ಶ್ರೀನಿವಾಸ್ ನೆರವೇರಿಸಿ ಮಾತನಾಡಿ, ಸ್ತ್ರೀ ಶಕ್ತಿ ಗುಂಪಿನವರು ಸಂಘಟಿತರಾಗಿ ಸ್ವಾವಲಂಬಿ ಬದುಕು ಸಾಗಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದ ಸೌಲಭ್ಯಗಳನ್ನು ಪಡೆಯುವದರ ಜೊತೆಗೆ ಬ್ಯಾಂಕ್‍ಗಳ ಮೂಲಕ ರಿಯಾಯಿತಿಯ ವಿಶೇಷ ಅನುದಾನದ ಸೌಲಭ್ಯಗಳನ್ನು ಪಡೆಯುವದರ ಮೂಲಕ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡುತ್ತಾ ಮಹಿಳೆಯರು ವಿವಿಧ ಸಂಘಟನೆಗಳ ಮೂಲಕ ಒಗ್ಗೂಡಿ ತಮ್ಮ ಆರ್ಥಿಕ ಬದುಕನ್ನು ಸುಧಾರಿಸಿಕ್ಕೊಳ್ಳಲು ಇಂತಹ ಯೋಜನೆಗಳು ಉಪಯುಕ್ತವಾಗುತ್ತವೆ.

ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳ ಮೂಲಕ ತನ್ನ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸಿಕೊಂಡು ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಹಕಾರಿಯಾಗುವದು ಎಂದರು. ವೇದಿಕೆಯಲ್ಲಿ ಸೋಮವಾರಪೇಟೆ ತಾ.ಪಂ. ನ ಮಾಜಿ ಅಧ್ಯಕ್ಷೆ ಜ್ಯೋತಿ ಶಿವಣ್ಣ, ಹೆಬ್ಬಾಲೆ ಬನಶಂಕರಿ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜ್, ಗ್ರಾ.ಪಂ ಉಪಾಧ್ಯಕ್ಷೆ ಸರೋಜಮ್ಮ ಗ್ರಾ.ಪಂ ಸದಸ್ಯರಾದ ಪ್ರಮೀಳ, ದೇವಮ್ಮ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸರಳಾಮಣಿ ಸೇರಿದಂತೆ ಅಧಿಕಾರಿ ವೃಂದ ಹಾಜರಿದ್ದರು.

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ತಾಲೂಕಿನಾದÀ್ಯಂತ ವಿವಿಧÀ ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಗುಂಪಿನ ಮಹಿಳೆಯರು ಮಾರಾಟ ಮೇಳದಲ್ಲಿ ತಮ್ಮ ತಮ್ಮ ಗುಂಪಿನಿಂದ ತಂದ ವಸ್ತುಗಳನ್ನು ಮಾರಾಟ ಮಾಡುವದರಲ್ಲಿ ಹೆಚ್ಚು ಉತ್ಸುಕರಾಗಿ ತೊಡಗಿದ್ದರು. ಸರಳಾಮಣಿ ಸ್ವಾಗತಿಸಿ, ಮೇರಿ ವಂದಿಸಿದರು.