ಕುಶಾಲನಗರ, ಅ. 25: ಕುಶಾಲನಗರ ಹೋಬಳಿಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ, ಆರನೇ ಹೊಸಕೋಟೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕ ಅಪ್ಪಚ್ಚುರಂಜನ್ ಒಂದು ಕೋಟಿ ರೂ. ವೆಚ್ಚದ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶೇಷ ಯೋಜನೆಗಳಲ್ಲಿ ಒಂದಾದ ಕಾಂಕ್ರಿಟ್ ರಸ್ತೆಯನ್ನು ಪರಿಶಿಷ್ಟ ವರ್ಗ ಹಾಗೂ ಪಂಗಡಗಳ ನಿವಾಸಿಗಳಿರುವ ಕಡೆಗಳಲ್ಲಿ ನಿರ್ಮಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಅವರು, ಉತ್ತಮ ಗುಣ ಮಟ್ಟದ ರಸ್ತೆಯನ್ನು ನಿರ್ಮಿಸಲು ಗುತ್ತಿಗೆದಾರ ಹಾಗೂ ಅಭಿಯಂತರರಿಗೆ ಸೂಚಿಸಿದರು.
ಇದೇ ಸಂದರ್ಭ ಸ್ಥಳಕ್ಕೆ ಧಾವಿಸಿದ ಹೆಬ್ಬಾಲೆ ವ್ಯಾಪ್ತಿಯ ರೈತರು, ನಾವುಗಳು ನೆಮ್ಮದಿಯಿಂದ ಭತ್ತವನ್ನು ಬೆಳೆಯಲು ಸಾಕಾಗುವಷ್ಟು ನೀರನ್ನು ಹಾರಂಗಿ ಎಡದಂಡೆ ಕಾಲುವೆಯಲ್ಲಿ ಹರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಕೃಷಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್, ಬಿಜೆಪಿ ಅಧ್ಯಕ್ಷ ಕುಮಾರಪ್ಪ, ತಾ.ಪಂ. ಸದಸ್ಯ ಜಯಣ್ಣ, ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಲತಾಸತೀಶ್, ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಪ್ರಮೀಳ, ಪದ್ಮ, ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಬಸವರಾಜು, ಪ್ರಮುಖರಾದ ಜಿ.ಎಲ್.ರಾಮಪ್ಪ, ಎಚ್.ಎಚ್. ಸುಂದರ್, ವಿಜಯ್, ಎಚ್.ಎಸ್. ರಘು, ಮೊದಲಾದವರಿದ್ದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು, ಸಹಾಯಕ ಅಭಿಯಂತರ ಜಗದೀಶ್ ಇದ್ದರು.