*ಗೋಣಿಕೊಪ್ಪಲು, ಜು. 26: ಪಟ್ಟಣದ ಕೀರೆ ಹೂಳೆ ಹೊಳೆತ್ತುವ ಕಾರ್ಯ ಮತ್ತು ಕಸ ವಿಲೇವಾರಿಯಲ್ಲಿ ಕಾಂಗ್ರೆಸ್ ಸದಸ್ಯರು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ ತನಿಖೆಗೆ ಒತ್ತಾಯಿಸಿದ್ದಾರೆ.

ಆರ್.ಎಂ.ಸಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೀರೆ ಹೊಳೆ ಹೂಳೆತ್ತುವ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಿ ಹೆಚ್ಚು ಹಣ ಪಡೆದುಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಲಾಬಿ ನಡೆದಿದೆ. ಕಳೆದ ಹಲವು ವರ್ಷಗಳಿಂದ ಕೀರೆ ಹೊಳೆ ಸೇರಿದಂತೆ ಬೈಪಾಸ್‍ನಲ್ಲಿ ಹಾದು ಹೋಗುವ ತೋಡಿನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ರೂ. 1.40 ಲಕ್ಷದಲ್ಲಿ ಮೊದಲ ವರ್ಷದಲ್ಲಿ ಹೂಳೆತ್ತುವ ಕಾರ್ಯ ನಡೆದಿತ್ತು. ತದ ನಂತರ ರೂ. 2.80 ಲಕ್ಷ ತನಕ ಕಳೆದ ವರ್ಷ ಏರಿಕೆಯಾಗಿತ್ತು. ಕಾಂಗ್ರೆಸ್ ಸದಸ್ಯರು ಲಾಬಿಗಾಗಿ ಪ್ರಸ್ತುತ ವರ್ಷದಲ್ಲಿ ಕೇವಲ ಒಂದು ಹೊಳೆಗೆ ರೂ. 3.30 ಲಕ್ಷಗಳ ಬಿಲ್ ನೀಡಿ ಹಣ ಡ್ರಾ ಮಾಡಿಕೊಂಡಿ ರುವದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಹೂಳೆತ್ತುವ ಕಾರ್ಯ ಹಾಗೂ ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡದೆ ಕಾಂಗ್ರೆಸ್ ಸದಸ್ಯರ ಬಹುಮತವಿದೆ ಎಂಬ ಹುಂಬತನ ದಿಂದ ಗ್ರಾಮ ಪಂಚಾಯಿತಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಕಸ ವಿಲೇವಾರಿಗೆ ರೂ. 62 ಸಾವಿರ ಮತ್ತು ರೂ. 10 ಸಾವಿg ಬಿಲ್ಲನ್ನು ಊಟದ ಖರ್ಚು ಎಂದು ನೀಡಿ ಪಂಚಾಯಿತಿ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾ.ಪಂ. ಸದಸ್ಯನಾಗಿದ್ದಾಗ ಪಟ್ಟಣದ ಕಸವನ್ನು ತನ್ನ ಜಾಗಕ್ಕೆ ವಿಲೇವಾರಿ ಮಾಡಲು ಅವಕಾಶ ಕಲ್ಪಿಸಿದ್ದೆ. ಈ ಸಂದರ್ಭ ಪಂಚಾಯಿತಿ ಯಿಂದ ಯಾವದೇ ಹಣ ಪಡೆದುಕೊಂಡಿಲ್ಲ. ಯಾವದೇ ಲಾಬಿಗಾಗಿಯೂ ಈ ಕಾರ್ಯಕ್ಕೆ ಮುಂದಾಗಿಲ್ಲ. ಪಟ್ಟಣವನ್ನು ಶುಚಿಯಾಗಿಡುವದಷ್ಟೇ ತÀನ್ನ ಗುರಿಯಾಗಿತ್ತು. ಆದರೆ ಗ್ರಾ.ಪಂ. ಸದಸ್ಯರೊಬ್ಬರು ತಾನು ರೂ. 1.5 ಲಕ್ಷ ಹಣ ಪಡೆದಿರುವದಾಗಿ ಆರೋಪಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ. ಹಣ ಪಡೆಯದೇ ಇರುವದಕ್ಕೆ ಪಂಚಾಯಿತಿ ದೃಢೀಕರಣ ಪತ್ರ ನೀಡಿದೆ. ಈ ಬಗ್ಗೆ ಮಾನನಷ್ಟ ದೂರು ದಾಖಲಿಸುವದಾಗಿ ಈ ಸಂದರ್ಭ ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಮಾತನಾಡಿ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ತಾನು ಹಿಂದುಳಿದ ವರ್ಗದ ಮಹಿಳೆ ಎಂಬ ಕಾರಣಕ್ಕೆ ನನ್ನನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಬೆಂಬಲಿತ 14 ಸದಸ್ಯರು ತÀನ್ನನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು. ಕೆಲವರು ಪಂಚಾಯಿತಿಯಲ್ಲಿ ಗೂಂಡಾ ವರ್ತನೆ ತೋರುತ್ತಿದ್ದು, ಪಂಚಾಯಿತಿಯಲ್ಲಿ ನಮಗೆ ಕಾರ್ಯನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಿಸುತ್ತಿದ್ದಾರೆ. ಕಸ ವಿಲೇವಾರಿ ಮತ್ತು ಕೀರೆಹೊಳೆ ಹೂಳೆತ್ತುವ ಕಾರ್ಯದಲ್ಲಿ ಅಧಿಕ ಬಿಲ್ ಪಾವತಿಸಿ ಚೆಕ್‍ಗಾಗಿ ಬೆದರಿಕೆ ಹಾಕುತ್ತಾ ತನ್ನ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿ ಚೆಕ್ಕಿಗೆ ಸಹಿ ಹಾಕಲು ಒತ್ತಡ ಹೇರಿ ತÀನಗೆ ಭಯ ಹುಟ್ಟಿಸುತ್ತಿದ್ದಾರೆ. ಈ ಕಾರಣವೇ ಕೀರೆ ಹೊಳೆ ಹೂಳೆತ್ತುವ ಕಾರ್ಯದಲ್ಲಿ ಅವ್ಯವಹಾರ ನಡೆದಿದೆ ಎಂದು ತಿಳಿದಿದ್ದರೂ ಬಲವಂತವಾಗಿ ಸಹಿ ಹಾಕುವ ಪ್ರಸಂಗ ಎದುರಾಗಿದೆ. ಅವ್ಯವಹಾರದ ಬಗ್ಗೆ ಸಿ.ಓ. ಅವರಿಗೆ ಪತ್ರ ಬರೆಯುವದಾಗಿ ಈ ಸಂದರ್ಭ ತಿಳಿಸಿದರು.

ಸಾರ್ವಜನಿಕ ಸೇವೆಗೆ ಚುನಾಯಿತರಾಗಿ ಆಯ್ಕೆಯಾದ ಪ್ರತಿನಿಧಿಗಳು ಪಂಚಾಯಿತಿ ಲೂಟಿ ಹೊಡೆಯಲು ಮುಂದಾಗಿದ್ದಾರೆ. ಬಹುಮತ ಇದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸದಸ್ಯರು ದರ್ಬಾರ್ ನಡೆಸಲು ಮುಂದಾಗಿದ್ದಾರೆ. ಹಣ ಲೂಟಿಕೋರರಾಗಿ ಪರಿವರ್ತನೆ ಗೊಂಡಿದ್ದಾರೆ. ಇವರ ಬಗ್ಗೆ ಸರಕಾರ ಮಟ್ಟದಲ್ಲಿ ಕಾನೂನು ಕ್ರಮಗೊಳ್ಳುವದು ಸೂಕ್ತ ಎಂದು ಬಿ.ಜೆ.ಪಿ ಜಿಲ್ಲಾ ಸದಸ್ಯ ವಿ.ಎ ವೆಂಕಟೇಶ್ ಹೇಳಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರಾದ ಕೆ.ಪಿ. ಬೋಪಣ್ಣ, ರತಿ ಅಚ್ಚಪ್ಪ, ರಾಮಕೃಷ್ಣ, ಸಾವಿತ್ರಿ, ನಗರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪೊನ್ನಪ್ಪ, ನಗರ ಬಿ.ಜೆ.ಪಿ ಅಧ್ಯಕ್ಷ ಗಾಂಧಿ ದೇವಯ್ಯ ಉಪಾಧ್ಯಕ್ಷ ಲೊಕೇಶ್ ಉಪಸ್ಥಿತರಿದ್ದರು.