ಕೂಡಿಗೆ, ಡಿ. 10: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಹುಲುಸೆ ಯಲ್ಲಿ ಕುಶಾಲನಗರ ಹೋಬಳಿ ಕೃಷಿ ಇಲಾಖೆ ವತಿಯಿಂದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಉದ್ಘಾಟಿಸಿ, ಮಾತನಾಡಿ, ರೈತರು ತಮ್ಮ ಜಮೀನುಗಳ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಅನುಗುಣವಾಗಿ ಸಾವಯವ ಗೊಬ್ಬರ ಹಾಗೂ ಇತರೇ ಗೊಬ್ಬರಗಳನ್ನು ಬಳಕೆ ಮಾಡುವದರ ಮೂಲಕ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವದು. ಗ್ರಾಮಾಂತರ ಪ್ರದೇಶದ ರೈತರು ಸಮೀಪದ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ತೆರಳಿ ಮಣ್ಣನ್ನು ಪರೀಕ್ಷಿಸಿಕೊಳ್ಳಲು ಕರೆ ನೀಡಿದರು.

ಭೂಚೇತನ ಯೋಜನೆಯ ತಾಂತ್ರಿಕ ಅಧಿಕಾರಿ ಮಂಜುನಾಥ್ ಮಾತನಾಡಿ, ರೈತರು ತಮ್ಮ ಜಮೀನಿನ ಪೋಷಕಾಂಶಗಳ ಅನುಗುಣ ಹಾಗೂ ಕೃಷಿಯಲ್ಲಿ ಮಣ್ಣಿನ ಗುಣಧರ್ಮಗಳನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯವಶ್ಯಕ. ಜೈವಿಕ ವಿಶ್ಲೇಷಣೆಯ ಮೂಲಕ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯ ಪ್ರಮಾಣವನ್ನು ತಿಳಿದು ಅದರ ಅನುಗುಣ ಬೇಸಾಯ ಮಾಡುವದು ಉತ್ತಮ ಎಂದರು.

ಇದೇ ಸಂದರ್ಭ ಮಣ್ಣು ಪರೀಕ್ಷೆ ಮಾಡಿಸಿಕೊಂಡ ರೈತರ ಮಣ್ಣಿನ ಫಲಿತಾಂಶದ ಕಾರ್ಡುಗಳನ್ನು ಇಲಾಖೆಯ ವತಿಯಿಂದ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲುಸೆಯ ಪ್ರಗತಿಪರ ರೈತ ಹೇಮಂತ್ ಕುಮಾರ್ ವಹಿಸಿದ್ದರು.

ಕುಶಾಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ.ಸಿ. ಪೂಣಚ್ಚ, ಕೊಡಗು-ಹಾಸನ ಸಾವಯವ ಕೃಷಿ ಒಕ್ಕೂಟದ ನಿರ್ದೇಶಕ ಕಪಿನಪ್ಪ ಸೇರಿದಂತೆ ಮತ್ತಿತರರು ಇದ್ದರು.