*ಗೋಣಿಕೊಪ್ಪಲು, ಜು. 30: ಬಾಳೆಲೆ ಸಮೀಪದ ಕೊಟ್ಟಗೇರಿಯಲ್ಲಿ ಹುಲಿ ಹಸುವಿನ ಮೇಲೆ ಧಾಳಿಮಾಡಿ ಬಲಿತೆಗೆದುಕೊಂಡಿರುವ ಘಟನೆ ಶನಿವಾರ ಜರುಗಿದೆ. ಕೊಟ್ಟಗೇರಿಯ ಎಚ್.ಎಸ್.ಮುತ್ತ ಅವರಿಗೆ ಸೇರಿದ ಹಸು ಮೇಯುತ್ತಿದ್ದ ಸಂದರ್ಭದಲ್ಲಿ ಧಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು ಅದರ ಮಾಂಸವನ್ನು ಭಾಗಶಃ ತಿಂದು ಹಾಕಿದೆ. ಶನಿವಾರ ಮಧ್ಯಾಹ್ನ ಹಸುವನ್ನು ಹುಡುಕಿಕೊಂಡು ಹೋಗುತ್ತಿದ್ದ ಮುತ್ತ ಅವರಿಗೆ ಘಟನೆ ಗೋಚರಿಸಿದೆ.

ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಪ್ರಸನ್ನಕೃಷ್ಣ ಪಟಾಗರ್,ಕಲ್ಲಳ್ಳ ಆರ್‍ಎಫ್‍ಒ ಶಿವರಾಂ, ಫಾರೆಸ್ಟರ್ ಕನಕರಾಜು ಭೇಟಿ ನೀಡಿ ಪರಿಶೀಲಿಸಿದರು. ಹಸುವನ್ನು ಕಳೆದುಕೊಂಡ ಮಾಲೀಕರಿಗೆ ಪರಿಹಾರ ಧನ ರೂ.10 ಸಾವಿರ ನೀಡಲಾಗುವದು ಎಂದು ಹೇಳಿದರು. ಕಳೆದ 15 ದಿನದಲ್ಲಿ ಕೊಟ್ಟಗೇರಿ ಭಾಗದಲ್ಲಿ ಹುಲಿ ಧಾಳಿಗೆ 3 ಜಾನುವಾರು ಬಲಿಯಾಗಿವೆ. ಹುಲಿಯನ್ನು ಸೆರೆ ಹಿಡಿಯಲು ಸ್ಥಳದಲ್ಲಿ ಬೋನಿಡಲಾಗುವದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ನಾಗರಿಕ ಆಕ್ರೋಶ: ರೈತರ ಜಾನುವಾರಗಳನ್ನು ಹುಲಿ ನಿರಂತರವಾಗಿ ಬಲಿತೆಗೆದುಕೊಳ್ಳುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸು ವಂತಾಗಿದೆ. ಅರಣ್ಯ ಇಲಾಖೆ ಕ್ರಮ ಕೈಗೊಂಡು ಹುಲಿ ನಿಯಂತ್ರಗೊಳಿ ಸಬೇಕು ಎಂದು ಒತ್ತಾಯಿಸಿದರು.

- ಚಿತ್ರ ವರದಿ : ಎನ್.ಎನ್.ದಿನೇಶ್