ಸೋಮವಾರಪೇಟೆ, ಜು.26: ನಗರದ ಸೋಮೇಶ್ವರ ದೇವಾಲಯ ಸೇರಿದಂತೆ ಬಜೆಗುಂಡಿ ಗ್ರಾಮದ ಅಯ್ಯಪ್ಪ ದೇವಾಲಯದ ಹುಂಡಿ ಗಳನ್ನು ಒಡೆದು ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪತ್ತೆ ಹಚ್ಚಿದ ಸ್ಥಳೀಯರು ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ ನುಗ್ಗಿ ಹುಂಡಿಯನ್ನು ಒಡೆದು ಹಣ ಎಗರಿಸಿರುವ ಕಳ್ಳರ ಗುಂಪು, ಬೆಳಗ್ಗಿನ 3.30ರ ಸುಮಾರಿಗೆ ಬಜೆಗುಂಡಿ ಗ್ರಾಮದ ಅಯ್ಯಪ್ಪ ದೇವಾಲಯದ ಬಳಿ ತೆರಳಿದೆ. ದೇವಾಲಯದ ಮುಂಭಾಗ ಕಾರು ನಿಲ್ಲಿಸಿದ ಶಬ್ದವನ್ನು ಗ್ರಹಿಸಿದ ಸ್ಥಳೀಯ ನಿವಾಸಿ ಜನಾರ್ಧನ್ ಎಂಬವರು, ತಮ್ಮ ಮನೆಯ ಕಿಟಕಿಯಿಂದ ಹೊರ ಇಣುಕಿದ್ದಾರೆ. ಈ ಸಂದರ್ಭ ಈರ್ವರು ದೇವಾಲಯದ ಒಳಗೆ ತೆರಳಿ ಹುಂಡಿಯನ್ನು ಒಡೆಯುತ್ತಿದ್ದರೆ, ಕಾರಿನಲ್ಲಿದ್ದ ಈರ್ವರು ಅನತಿ ದೂರಕ್ಕೆ ತೆರಳಿದ್ದಾರೆ.
ಇದನ್ನು ಗಮನಿಸಿದ ಜನಾರ್ಧನ್ ಅವರು ತಮ್ಮ ಸಹೋದರ ರವಿ ಅವರಿಗೆ ವಿಷಯ ಮುಟ್ಟಿಸಿದ್ದು, ಈರ್ವರೂ ಮನೆಯಿಂದ ಹೊರ ಬರುವಷ್ಟರಲ್ಲಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದರು. ಆದರೂ ಕಳ್ಳರ ಕಾರನ್ನು ಆಟೋವೊಂದರಲ್ಲಿ ಬೆನ್ನತ್ತಿದ ಸ್ಥಳೀಯರಾದ ಜನಾರ್ಧನ್, ರವಿ, ಸಿದ್ಲಿಂಗು, ಬಾಲ ಅವರುಗಳು ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಆದರೆ ಠಾಣೆಯಲ್ಲಿ ಕರೆ ಸ್ವೀಕರಿಸದೇ ಇದ್ದುದರಿಂದ ಖುದ್ದು ಠಾಣೆಗೆ ತೆರಳಿ ಮಾಹಿತಿ ನೀಡಿ ವಾಪಸ್ ಆಗುತ್ತಿದ್ದ ಸಂದರ್ಭ ಬಳಗುಂದ ಗ್ರಾಮದ ಬಳಿ ಕಳ್ಳರ ಕಾರು ಕಂಡುಬಂದಿದೆ. ತಕ್ಷಣ ಕಾರಿನ ಕೀ ಕಿತ್ತುಕೊಂಡ ಸ್ಥಳೀಯರು ಅದರಲ್ಲಿದ್ದ ಬೆಂಗಳೂರು ನಿವಾಸಿ ಅಕ್ಮಲ್ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನಕ್ಕೆ ಬಳಸಿದ್ದ ಕಾರನ್ನು (ಕೆ.ಎ. 04 ಎಂ. 4712) ಪೊಲೀಸರು ವಶಪಡಿಸಿ ಕೊಂಡಿದ್ದು, ಉಳಿದ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇಲ್ಲಿನ ಠಾಣಾಧಿಕಾರಿ ಎಂ. ಮಹೇಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಆರೋಪಿ ಅಕ್ಮಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸ್ಥಳೀಯ ಯುವಕ ಸೇರಿದಂತೆ ಕೆ.ಆರ್. ನಗರ, ಬೆಂಗಳೂರು ಮತ್ತು ಮಂಗಳೂರಿನ ಯುವಕರು ಕಳ್ಳರ ಗುಂಪಿನಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಎಲ್ಲರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಠಾಣಾಧಿಕಾರಿ ಮಹೇಶ್ ತಿಳಿಸಿದ್ದಾರೆ. ಜಿಲ್ಲೆಯ ಬೇರೆಡೆಯಲ್ಲೂ ದೇವಾಲಯ ಕಳವು ಪ್ರಕರಣಗಳು ನಡೆದಿದ್ದು, ಇದೇ ತಂಡ ಭಾಗಿಯಾಗಿದೆಯೇ ಎಂಬ ದಿಕ್ಕಿನಲ್ಲಿಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.