ಮಡಿಕೇರಿ, ಅ. 4: ಹಿರಿಯರಿಗೆ ಗೌರವ ನೀಡುವದರ ಜೊತೆಗೆ ಸಲಹೆ-ಮಾರ್ಗದರ್ಶನವನ್ನು ಪಡೆಯುವಲ್ಲಿ ಯುವ ಜನತೆ ಮುಂದಾಗಬೇಕು ಎಂದು ಒಂದನೆ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಡಿ. ಪವನೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಹಿರಿಯರು ಅಪಾರ ಜ್ಞಾನ ಹಾಗೂ ಅನುಭವಗಳನ್ನು ಹೊಂದಿರುತ್ತಾರೆ. ಇವರು ಸಮಾಜದ ಆಸ್ತಿಯಾಗಿದ್ದು, ಯುವಕರಿಗೆ ಮಾರ್ಗದರ್ಶಕರಾಗಿರಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿದ್ದಾರೆ. ಆದರೆ ಕೇವಲ 12 ಸಾವಿರದಷ್ಟು ಹಿರಿಯ ನಾಗರಿಕರು ಮಾತ್ರ ಗುರುತಿನ ಚೀಟಿ ಪಡೆದಿದ್ದಾರೆ. ಈ ಬಗ್ಗೆ ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಆಧುನಿಕತೆಯ ಸೋಗಿನಲ್ಲಿ ಕಿರಿಯರು ಹಿರಿಯರಿಗೆ ಗೌರವ ಕೊಡುವ ಪ್ರವೃತ್ತಿಯನ್ನು ಮರೆಯುತ್ತಿದ್ದಾರೆ. ಒಂದು ಕುಟುಂಬ ಹಾಗೂ ಸಮಾಜದಲ್ಲಿ ಹಿರಿಯರನ್ನು ಗೌರವಿಸುವಂತೆ ಆಗಬೇಕು. ಹಿರಿಯ ನಾಗರಿಕರಿಗೆ ದೌರ್ಜನ್ಯ ಹೆಚ್ಚಾಗಿ ಕುಟುಂಬ ವರ್ಗದವರಿಂದಲೇ ಆಗುತ್ತಿದೆ. ಹಾಗೆಯೇ ಹಿರಿಯರಿಗೆ ಮೂಲಭೂತ ಸೌಕರ್ಯಗಳ ಜೊತೆ ಪ್ರೀತಿ-ವಿಶ್ವಾಸಗಳಿಂದ ನೋಡಿಕೊಳ್ಳುವ ವಾತಾವರಣ ಸೃಷ್ಟಿ ಮಾಡುವ ಅಗತ್ಯತೆ ಪ್ರತಿ ಕುಟುಂಬದಲ್ಲಿ ಇರಬೇಕು ಎಂದು ರಾಜೇಂದ್ರ ಪ್ರಸಾದ್ ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ. ನಂಜಂಡೇ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನದಾಗಿ ಜೀವನಾಂಶ ಹಾಗೂ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದರು.

ಹಿರಿಯ ನಾಗರಿಕರ ಫೋರಂ ಅಧ್ಯಕ್ಷ ಜಿ.ಟಿ. ರಾಘವೇಂದ್ರ ಹಾಗೂ ಮಡಿಕೇರಿ ಸ್ತ್ರೀ ಶಕ್ತಿ ವೃದ್ಧಾಶ್ರಮ ಮೇಲ್ವಿಚಾರಕ ಸತೀಶ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ವಕೀಲ ಎಂ. ನಿರಂಜನ್ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗರಾಜ್ ಮಾತನಾಡಿದರು.

ಪೆಮ್ಮಂಡ ಮಾಯಮ್ಮ ಪ್ರಾರ್ಥಿಸಿದರೆ, ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಗದೀಶ್ ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿ, ವಂದಿಸಿದರು.