ಸೋಮವಾರಪೇಟೆ, ಜ. 9: ಕನ್ನಡ ನಾಡಿನ ಹಿರಿಯ ಕವಿಗಳ ಒಡನಾಟ, ಅವರೊಂದಿಗಿನ ಬಾಂಧವ್ಯದಿಂದಾಗಿ ತನಗೂ ಸಾಹಿತ್ಯ ಕ್ಷೇತ್ರದಲ್ಲಿ ಅಭಿರುಚಿ ಮೂಡಿತು ಎಂದು 11ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್.ಸಿ. ರಾಜಶೇಖರ್ ಹೇಳಿದರು.ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 1966-67ರಲ್ಲಿ ಮೈಸೂರು ವಿವಿಯಲ್ಲಿ ಕನ್ನಡ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡ ಸಂದರ್ಭ ಹಿರಿಯ ಸಾಹಿತಿಗಳಾದ ದೇ.ಜವರೇಗೌಡ, ತೀ.ನಂ.ಶ್ರೀ, ಎಸ್.ವಿ.ಪರಮೇಶ್ವರಭಟ್ಟ, ಗೊ.ರು.ಚನ್ನಬಸಪ್ಪ, ಸಾ.ಶಿ.ಮರುಳಯ್ಯ ಸೇರಿದಂತೆ ಹಲವರ ಒಡನಾಟ ದಿಂದಾಗಿ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು. ಅದರ ಫಲವಾಗಿ ಈವರೆಗೆ ಸುಮಾರು 12 ಕೃತಿಗಳನ್ನು ರಚಿಸಲು ಸಾಧ್ಯವಾಯಿತು ಎಂದು ರಾಜಶೇಖರ್ ನೆನಪಿಸಿಕೊಂಡರು.
ಗುರುಹಿರಿಯರ ಆಶೀರ್ವಾದ ದಿಂದಾಗಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ, ಎಲ್ಲರ ಅಭಿಮಾನ ಹಾಗೂ ಸಾವಿರಾರು ಶಿಷ್ಯಂದಿರ ಹಾರೈಕೆಯಿಂದಾಗಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ತಾವು ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಹರಸಲು ನಮ್ಮೊಂದಿಗೆ ಪೂಜ್ಯ ಗುರುಗಳಾದ ದಿ. ಸಚ್ಚಿದಾನಂದ ಅವರು ಇರಬೇಕಿತ್ತು ಎಂದು ಕೆಲಕಾಲ ಗದ್ಗದಿತರಾದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ಕನ್ನಡ ಉಪನ್ಯಾಸಕರಾಗಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ರಾಜಶೇಖರ್ ಅವರಿಗೆ ಈ ಹಿಂದೆಯೇ ಗೌರವ ಸಲ್ಲಬೇಕಿತ್ತು. ಆದರೆ ಕನ್ನಡದ ಕಟ್ಟಾಳು ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರೂ ಕಳೆದ ಎರಡು ದಶಕಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಪ್ರಸ್ತುತ ಜಿಲ್ಲಾ ಅಧ್ಯಕ್ಷರಾಗಿರುವ ಲೋಕೇಶ್ ಸಾಗರ್ ಮತ್ತು ತಂಡ ಈ ಕೊರಗನ್ನು ನೀಗಿಸಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ರಾಜಶೇಖರ್ ಅವರಿಗೆ ಸಿಕ್ಕಿದ ಗೌರವ ಇಡೀ ತಾಲೂಕಿಗೆ ಹೆಮ್ಮೆ ಮೂಡಿಸಿದೆ ಎಂದರು. ಸಭೆಯಲ್ಲಿ ಸಮ್ಮೇಳನದ ಕುರಿತು ಜಿಲ್ಲಾ ಕಸಾಪ ಕೋಶಾಧಿಕಾರಿ ಎಸ್.ಎ.ಮುರಳೀಧರ್ ಮಾಹಿತಿ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಜೆ.ಜವರ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಎಸ್.ಡಿ.ವಿಜೇತ್ ಸ್ವಾಗತಿಸಿದರೆ, ತಾಲೂಕು ಖಜಾಂಚಿ ಡಿ.ಪಿ.ಲೋಕೇಶ್ ವಂದಿಸಿದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ನಿರ್ದೇಶಕರಾದ ತೇಲಪಂಡ ಕವನ್ ಕಾರ್ಯಪ್ಪ, ಎಸ್.ಪಿ.ಪ್ರಸನ್ನ, ತಾಲೂಕು ಗೌರವ ಕಾರ್ಯದರ್ಶಿ ರಾಣಿ ರವೀಂದ್ರ ಉಪಸ್ಥಿತರಿದ್ದರು.