ಮಡಿಕೇರಿ, ಸೆ. 27 : ‘ಜಾಡ್ಸಿ ಒದಿತ್ತೀನಿ..., ಬೋ... ಮಗನೇ..., ಗತಿ ಕಾಣಿಸ್ತೀನಿ..., ಸೂ... ಮಕ್ಳಾ..., ದನP Áಯೋಕೋಗು ನೀನು...’ ಎಂತಹ ಬೈಗುಳಗಳು ಇವು..., ಹಾದಿ - ಬೀದಿಯಲ್ಲಿ..., ಮಾರುಕಟ್ಟೆಯಲ್ಲಿ..., ನಡೆದ ಜಗಳವಲ್ಲ..., ಕುಡುಕರು ನಶೆಯಲ್ಲಾಡಿದ ತೊದಲುಗಳೂ ಅಲ್ಲ..., ಓರ್ವ ಜವಾಬ್ದಾರಿಯುತ ಹಿರಿಯ ಅಧಿಕಾರಿ ತನ್ನ ಕೈಕೆಳಗಿನ ಮತ್ತೋರ್ವ ಅಧಿಕಾರಿಗೆ ಬೈದ ಬೈಗುಳಗಳ ನುಡಿಮುತ್ತುಗಳು...! ತನ್ನ ‘ಸ್ಟೇಟಸ್’ ಅನ್ನು ಮರೆತು ಆಡಿದ ಪದಗಳು. ಹಿರಿಯ ಅಧಿಕಾರಿಯ ಈ ಪದಗಳು ವಾಟ್ಸ್ ಆ್ಯಪ್‍ನಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಸುದ್ದಿ ಮಾಡುತ್ತಿದೆ.

ದುಬಾರೆಯಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎ.ಜಿ. ಜಾದವ್ ಅವರು ಕುಶಾಲನಗರ ವಲಯ ಅಭಿಯಂತರ ರಘು ಎಂಬವರಿಗೆ ದೂರವಾಣಿ ಕರೆ ಮಾಡಿ ಬೈದ ಪದಗಳಿವು. ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ಅಧಿಕಾರಿ ಇಂಜಿನಿಯರ್ ಉತ್ತರಿಸುವಾಗ ಇದ್ದಕ್ಕಿದ್ದ ಹಾಗೆ ಸಿಡಿಮಿಡಿಗೊಂಡು ‘ಏನ್ ಮಾಡ್ತಿದ್ದೀಯಾ ನೀನು, ಜಾಡ್ಸಿ ಒದಿಲಾ ನಿಂಗೆ; ನಾನ್ಸೆನ್ಸ್ ನೀನು..., ಇಂಜಿನಿಯರಾ ನೀನು, ದನ ಕಾಯೋಕ್ಕೋಗು ಎಂದು ಅಬ್ಬರಿಸುತ್ತಾರೆ.

ಅಷ್ಟರಲ್ಲಿ ಇಂಜಿನಿಯರ್ ರಘು ಸಮಾಧಾನವಾಗಿ ವಿವರಿಸುವಾಗ ‘ಒದಿತ್ತೀನಿ ಅಷ್ಟೇ..., ಬೋ... ಮಗನೇ’ ಅಂತ ಗದರಿಸುತ್ತಾರೆ. ಅಸಮಾಧಾನಗೊಂಡ ರಘು ‘ಹಾಗೆಲ್ಲ ಬೋ..., ಮಗನೇ ಅಂತ ಬಯ್ಯಲು ನಿಮಗೆ ‘ರೈಟ್ಸ್ ಇಲ್ಲ. ನಮ್ಮ ತಂದೆ, ತಾಯಿ ಕೂಡ ಆ ರೀತಿ ಬಯ್ಯೋದಿಲ್ಲ’ ಎಂದು ಹೇಳುತ್ತಾರೆ. ‘ನಮಗೂ ಹಿರಿಯ ಅಧಿಕಾರಿಗಳನ್ನು ಗೊತ್ತಿದೆ. ಈ ರೀತಿಯ ಬೈಗುಳಗಳ್ನ ಕೇಳಿಕೊಂಡು ಸುಮ್ಮನಿರಬೇಕಾ...?’ ಎಂದು ಕೇಳುತ್ತಾರೆ.

ನಂತರ ಸಮಾಧಾನಿತರಾಗಿ ಕಾಮಗಾರಿ ಪ್ರಗತಿ ಬಗ್ಗೆ ವಿವರಿಸುತ್ತಾರೆ. ಅಷ್ಟರಲ್ಲಿ ಮತ್ತೆ ಜಾದವ್ ಅವರು

(ಮೊದಲ ಪುಟದಿಂದ) ‘ಏನು ಕಿಸ್ತಿರೋದು ನೀನು, ಏನೂ ಮಾಡಿಲ್ಲ ನೀನು’ ಎಂದು ಗದರಿಸುತ್ತಾರೆ.

‘ಒಳ್ಳೆಮಾತಲ್ಲಿ ಹೇಳಿ ಸರ್.., ಏನ್ ಕೆಲಸ ಬೇಕಾದರೂ ಮಾಡ್ತೀವಿ’ ಅಂತ ರಘು ಹೇಳಿದಾಗ ‘ಬೂಟ್ ಕಾಲಲ್ಲಿ ಒದಿಬೇಕು.., ದುರಂಹಕಾರ ತೋರಿಸ್ತೀಯ..., ದನಕಾಯೋಕ್ಕೋಗಿ ಸೂ..., ಮಕ್ಳಾ...’ ಎಂದು ಗದರಿಸುತ್ತಾರೆ. ಇದರಿಂದ ಬೇಸರಗೊಂಡ ರಘು ‘ಈ ಒಂದು ಕೆಲಸ ಮುಗ್ಸಿ ಕೋಡ್ತೀನಿ ಸರ್..., ನನ್ನನ್ನು ಇಲ್ಲಿಂದ ರಿಲೀವ್ ಮಾಡಿಕೊಡಿ, ಮಾಡಿಲ್ಲಂದ್ರೆ ನಾನೇ ಹೋಗ್ತೀನಿ...’ ಎಂದು ಅಂಗಲಾಚುತ್ತಾರೆ. ‘ರಿಲೀವ್ ಮಾಡೋದಲ್ಲ ನಿಂಗೆ ಒಂದು ಗತಿ ಕಾಣಿಸ್ತೀನಿ..., ನಿಮ್ಮಂತ ದನ ಕಾಯೋ ಸೂ... ಮಕ್ಳು ಸೇರ್ಕೊಂಡು ಡಿಪಾರ್ಟ್‍ಮೆಂಟ್ ಹಾಳಾಗಿ ಹೋಗಿದೆ. ಎದುರು ಸಿಕ್ಕು ನೀನು ಒದಿತ್ತೀನಿ ನಿಂಗೆ. ಎಲ್ಲಿದ್ದೀಯ ಹೇಳು...’ ಎಂಬಿತ್ಯಾಗಿ ಅವರಿಗಿಷ್ಟವಾದ ಪದಗಳನ್ನು ಪ್ರಯೋಗಿಸುತ್ತಾರೆ.

‘ಸರ್ ನೀವು ಮಾತಾಡಿದ್ದು ರೆಕಾರ್ಡ್ ಆಗಿದೆ. ಮಿನಿಸ್ಟರ್‍ಗೆ ತೋರಿಸ್ತೀನಿ’ ಅಂತ ರಘು ಹೇಳಿದಾಗ ‘ಹೋಗು ತೋರ್ಸು ಇನ್‍ಫ್ಲುಯನ್ಸ್ ಮಾಡ್ತಿಯಾ ನೀನು..., ಪೇಪರ್‍ಗೆ ಬೇಕಾದ್ರೆ ಕೊಡು, ಮಿನಿಸ್ಟರ್ ಹತ್ರ ಹೋಗಿ ಅಲ್ಲಿಂದ ಫೋನ್ ಮಾಡು ನಂಗೆ...’ ಎಂದು ಮತ್ತೆ ಗದರಿಸುತ್ತಾರೆ. ಇನ್ನೂ ಏನೇನೋ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಸುಮಾರು 7.38 ನಿಮಿಷಗಳ ಸಂಭಾಷಣೆ ನಡೆದಿದೆ. ಕೊನೆಯಲ್ಲಿ ಹಳ್ಳಾಕ್ಕಿಳಿದವರಂತೆ ‘ಸರಿ ಬಿಡು ಏನ್ ಸೈನ್ ಬೇಕು ಹೇಳು..., ನೀನ್ ಎಲ್ಲಿದ್ದೀಯ ಅಲ್ಲಿಗೆ ಬಂದು ಸೈನ್ ಮಾಡ್ತೀನಿ... ಬೇಗ ಮಾಡಿ ಮುಗ್ಸು’ ಅನ್ನೋ ಪದಗಳಿಂದ ಫೋನ್ ಕಟ್ ಆಗುತ್ತದೆ.

ಜಬಾಬ್ದಾರಿಯುತ್ತ್ತಾ ಹಿರಿಯ ಅಧಿಕಾರಿಯೋರ್ವರು ಈ ರೀತಿಯ ಪದಗಳನ್ನು ಬಳಸಿರುವ ಆಡಿಯೋ ವಾಟ್ಸ್‍ಆ್ಯಪ್‍ನಲ್ಲಿ ಹರಿದಾಡಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ಜಿಲ್ಲೆಯ ಶಾಸಕರುಗಳು, ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಇಂಜಿನಿಯರ್‍ಗಳು ಮನವಿ ಸಲ್ಲಿಸಿದ್ದಾರೆ. ಎಲ್ಲರೊಂದಿಗೂ, ಮಹಿಳಾ ಸಿಬ್ಬಂದಿಗಳೊಂದಿಗೂ ಇದೇ ರೀತಿ ವರ್ತಿಸುವ ಅಧಿಕಾರಿ ಜಿಲ್ಲೆಗೆ ಬೇಡವೆಂಬ ಆಗ್ರಹ ಕೂಡ ಕೇಳಿ ಬರುತ್ತಿದೆ.

- ಕುಡೆಕಲ್ ಸಂತೋಷ್