ಸಿದ್ದಾಪುರ, ಜ. 13: ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಭಾಗದಲ್ಲಿ ಗೋ ಹತ್ಯೆ ಹಾಗೂ ಗೋ ಕಳ್ಳತನ ನಿರಂತರವಾಗಿ ಹೆಚ್ಚುತ್ತಿದ್ದು, ಇದನ್ನು ಕೂಡಲೇ ತಡೆಗಟ್ಟುವಂತೆ ಒತ್ತಾಯಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಬಸವೇಶ್ವರ ದೇವಾಲಯದ ಅರ್ಚಕ ರಾಮಚಂದ್ರ ಭಟ್ ಗೋ ರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ಗೋವು ಸಂರಕ್ಷಣೆಯಿಂದ ಮಾತ್ರ ಭೂಮಿಗೆ ಉಳಿಗಾಲವಿದೆ. ಗೋವನ್ನು ಕಾಮಧೇನು ಎಂದು ಕರೆಯುತ್ತಿದ್ದು, ಹಿಂದೂ ಧರ್ಮದಲ್ಲಿ ಗೋವಿನ ಮಹತ್ವ ಬಹಳಷ್ಟಿದೆ. ಗೋವಿನ ಹಾಲು, ಮೂತ್ರ ಪವಿತ್ರತೆಯಿಂದ ಕೂಡಿದೆ. ಪರಿಸರ ಉಳಿಯಲು ಗೋವು ಮುಖ್ಯ ಎಂದರು.
ಪಾಶ್ಚಿಮಾತ್ಯ ಕಾಲದಿಂದಲೂ ಕೊಡಗಿನಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಗೋ ಹತ್ಯೆ ಮಾತ್ರ ರಾಜರೋಷವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.
ಹಿಂದೂ ಸಂಘಟನೆಯ ಪ್ರವೀಣ್ ಮಾತನಾಡಿ, ಸಿದ್ದಾಪುರ ಭಾಗದಲ್ಲಿ ಗೋ ಹತ್ಯೆ ಹಾಗೂ ಗೋವು ಕಳ್ಳತನ ಹೆಚ್ಚುತ್ತಿದ್ದು, ಠಾಣೆಯಲ್ಲಿ ಹಲವಾರು ಪ್ರಕರಣಗಳು ಕೂಡ ದಾಖಲಾಗಿದೆ. ಆದರೆ ಪೊಲೀಸ್ ಇಲಾಖೆಯವರು ಮಾತ್ರ ಇದರ ಅರಿವೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಪೊಲೀಸರು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಹೋರಾಟ ಮಾಡಲಾಗುವದು. ಗೋ ಹತ್ಯೆ ಮತ್ತು ಗೋ ಕಳ್ಳತನ ಅತೀ ಸೂಕ್ಷ್ಮ ವಿಚಾರವಾಗಿದ್ದು, ಪರಿಸ್ಥಿತಿ ಅರಿತು ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಗೋ ಹತ್ಯೆ ಹಾಗೂ ಗೋವುಗಳ ಕಳ್ಳತನ ತಡೆಯುವ ನಿಟ್ಟಿನಲ್ಲಿ ಇಲಾಖೆ ಕಾನೂನು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.