ಸೋಮವಾರಪೇಟೆ, ಡಿ. 16: ಸಮೀಪದ ಐಗೂರು ಗ್ರಾಮದ ಆರ್‍ಎಸ್‍ಎಸ್ ಮುಖಂಡ ಕೆ.ಎಸ್. ಪದ್ಮನಾಭ ಅವರ ಕಾರನ್ನು ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ತಾ. 20 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ತಾಲೂಕು ಸಂಚಾಲಕ ಬಿ.ಜೆ. ದೀಪಕ್ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ವಿವೇಕಾನಂದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ, ಜೇಸಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.

ಐಗೂರು ಮಸೀದಿಯಲ್ಲಿ ಕುರ್‍ಅನ್ ಸುಟ್ಟ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರುವದು ಅಭಿನಂದನಾರ್ಹ ವಾದರೂ, ಹಿಂದೂ ಸಂಘಟನೆಯ ಪ್ರಮುಖರ ಕಾರು ಸುಟ್ಟ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ವಿಳಂಬ ಧೋರಣೆ ತಾಳುತ್ತಿರುವದು ಯಾಕೆ? ಎಂದು ಪ್ರಶ್ನಿಸಿದರು.

ಮತೀಯ ಮೂಲಭೂತ ವಾದಿಗಳು ಜಿಲ್ಲೆಯ ಶಾಂತಿ ಕದಡುತ್ತಿದ್ದಾರೆ. ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇವರುಗಳೇ ಕುಶಾಲನಗರದಲ್ಲಿ ಹಿಂದೂಪರ ಸಂಘಟನೆಯ ಪ್ರವೀಣ್ ಪೂಜಾರಿ ಹತ್ಯೆ ಮಾಡಿದ್ದಾರೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ದೂರಿದರು. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಹಿಂದೂಪರ ಸಂಘಟನೆಗಳ ಹಲವು ಕಾರ್ಯಕರ್ತರ ಹತ್ಯೆ ನಡೆದಿದೆ. 19 ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿವೆ ಎಂದು ಆರೋಪಿಸಿದರು.

ಮತೀಯ ಮೂಲಭೂತ ವಾದಿಗಳು ಕೊಡಗನ್ನು ಕಾಶ್ಮೀರ ಮಾಡುತ್ತೇವೆ ಎಂದು ಕನಸು ಕಂಡಿದ್ದರೆ ಅದು ನನಸಾಗಲು ಹಿಂದೂ ಸಮಾಜ ಬಿಡುವದಿಲ್ಲ ಎಂದು ವಕ್ತಾರ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು. ಸ್ವಯಂ ಘೋಷಿತ ಪ್ರಗತಿಪರ ಚಿಂತಕರು ಒಂದು ಕೋಮಿನ ಜನರ ಓಲೈಕೆಗೆ ಮುಂದಾಗಿದ್ದಾರೆ. ಹಿಂದೂಗಳ ಮೇಲೆ ಇತರ ಜನಾಂಗವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಐಗೂರು ಮಸೀದಿಯಲ್ಲಿ ಕುರ್‍ಅನ್ ಸುಟ್ಟ ಪ್ರಕರಣದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿಲ್ಲ ಎಂಬದು ಎಲ್ಲರಿಗೂ ತಿಳಿದಿದೆ. ಈ ಕೃತ್ಯ ಎಸಗಿದವ ಜೆಡಿಎಸ್ ಕಾರ್ಯಕರ್ತನಾಗಿದ್ದರೂ ಸಹ ಜೆಡಿಎಸ್ ಪಕ್ಷದ ಮುಖಂಡರು ಇದೀಗ ನಾಟಕವಾಡುತ್ತಿದ್ದಾರೆ ಎಂದು ಕುಟುಕಿದರು. ಹಿಂದೂಪರ ಸಂಘಟನೆ ಕಾರ್ಯಕರ್ತರು ಇಂತಹ ನೀಚಮಟ್ಟದ ಕಿಡಿಗೇಡಿ ಕೃತ್ಯಕ್ಕೆ ಕೈಹಾಕುವದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೋಮವಾರಪೇಟೆಯಲ್ಲಿ ಪಾಕಿಸ್ತಾನ ಬಾವುಟ ಪ್ರಕರಣ, ಹೊಸತೋಟದಲ್ಲಿ ಉಗ್ರಗಾಮಿ ನಜೀರ್ ವಾಸ್ತವ್ಯ, ಜಿಲ್ಲೆಗೆ ಕೇರಳದ ಅಬ್ದುಲ್ ನಾಸೀರ್ ಮದನಿ ಭೇಟಿ ಇಂತಹ ಘಟನೆಗಳಿಂದ ಜಿಲ್ಲೆಯಲ್ಲಿ ಜಿಹಾದಿಗಳು ಕಾರ್ಯನಿರ್ವ ಹಿಸುತ್ತಿದ್ದಾರೆ ಎಂಬದಕ್ಕೆ ಪುಷ್ಟಿ ದೊರೆತಂತಾಗಿದೆ ಎಂದು ಸಮಿತಿಯ ಪ್ರಮುಖ ಬನ್ನಳ್ಳಿ ಗೋಪಾಲ್ ಹೇಳಿದರು. ಎಲ್ಲಾ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿಯ ಶಾಂತಳ್ಳಿ ಘಟಕದ ಅಧ್ಯಕ್ಷ ಪ್ರದೀಪ್, ಹಿಂದೂ ಜಾಗರಣಾ ವೇದಿಕೆ ಪ್ರಮುಖ ಶುಭಾಷ್ ತಿಮ್ಮಯ್ಯ ಉಪಸ್ಥಿತರಿದ್ದರು.