ಮಡಿಕೇರಿ, ಡಿ. 6: ಅಯೋಧ್ಯೆಯ ವಿವಾದಿತ ಬಾಬ್ರಿ ಮಸೀದಿಯ ಕಟ್ಟಡ ಧ್ವಂಸದ 25ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆ ಗಳಿಂದ ವಿಜಯೋತ್ಸವ ಆಚರಿಸಲಾಯಿತು.
ನಗರದ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂದಿರವಲ್ಲೇ ಕಟ್ಟುವೆವು... ಶ್ರೀ ರಾಮನ ಮಂದಿರ ಕಟ್ಟುವೆವು... ಎಂಬ ಘೋಷಣೆ ಮೊಳಗಿಸಿದರು. ಇದೇ ಸಂದರ್ಭ ಇಸ್ಕಾನ್ ಮಂದಿರ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿ ಸಂಭ್ರಮಿಸಲಾಯಿತು.
ಈ ಸಂದರ್ಭ ವಿಶ್ವಹಿಂದೂ ಪರಿಷತ್ನ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಡಿ. ನರಸಿಂಹ ಮಾತನಾಡಿ, 1992ರಲ್ಲಿ ಅಯೋಧ್ಯೆ ಯಲ್ಲಿದ್ದ ವಿವಾದಿತ ಕಟ್ಟಡದ ಧ್ವಂಸದ ಹಿನ್ನೆಲೆ ಯಲ್ಲಿ ವಿಜಯೋತ್ಸವ ಆಚರಿಸಲಾಗಿದೆ. ಈ ವಿವಾದಿತ ಕಟ್ಟಡ ಹಿಂದೂಗಳಿಗೆ ಸೇರಿದ ಪವಿತ್ರ ಶ್ರೀ ರಾಮ ಮಂದಿರ ವಾಗಿತ್ತು. ಮತ್ತೆ ಅಲ್ಲಿ ಭವ್ಯ ಮಂದಿರ ವನ್ನು ನಿರ್ಮಿಸ ಲಾಗುವದು ಎಂದು ಹೇಳಿದರು.
ಭಜರಂಗದಳದ ಜಿಲ್ಲಾ ಸಂಚಾಲಕ ಎಂ.ಕೆ. ಅಜೀತ್ಕುಮಾರ್ ಮಾತನಾಡಿ, ಅಯೋಧ್ಯೆಯಲ್ಲಿದ್ದ ವಿವಾದಿತ ಕಟ್ಟಡವನ್ನು ನೆಲಸಮ ಗೊಳಿಸಿ ಅಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದ್ದು, ಕಟ್ಟಡ ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲಾಗಿದೆ ಎಂದು ಹೇಳಿದರು.
ಮಾತಿನ ಚಕಮಕಿ
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರಬಂದು ಪಟಾಸಿ ಸಿಡಿಸುತ್ತಿದ್ದಂತೆ ಪೊಲೀಸರು ಪಟಾಕಿ ಸಿಡಿಸದಂತೆ ಯತ್ನಿಸುತ್ತಿದ್ದ ದೃಶ್ಯ ಕಂಡು ಬಂದಿತು. ಈ ಸಂದರ್ಭ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ಕೆ.ಎಚ್. ಚೇತನ್, ಅಜಿತ್, ಅಪ್ಪಣ್ಣ, ನಂದೀಶ್, ಮನುರೈ, ಚರಣ್, ವಿನಯ್ಕುಮಾರ್, ಗಣೇಶ್, ಪ್ರಶಾಂತ್, ಮನುಮಂಜುನಾಥ್ ಹಾಗೂ ಇನ್ನಿತರರು ಇದ್ದರು.
ದೇವಾಲಯ ಹೊರಭಾಗದಲ್ಲಿ ಡಿವೈಎಸ್ಪಿ ಛಬ್ಬಿ ನೇತೃತ್ವದಲ್ಲಿ ನಗರ ವೃತ್ತ ನಿರೀಕ್ಷಕ ಮೇದಪ್ಪ, ಎಸ್ಐ ಭರತ್ ಅವರ ಉಸ್ತುವಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.