ಸೋಮವಾರಪೇಟೆ,ಜೂ.27: ಹಿಂದೂ ಸಂಘಟನೆಗಳ ಹೋರಾಟಗಾರರ ವಿರುದ್ಧ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ದೂರು ದಾಖಲಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಆ ಮೂಲಕ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಈ ಆಟ ಹೆಚ್ಚು ದಿನ ನಡೆಯುವದಿಲ್ಲ ಎಂದು ಅಭಿಪ್ರಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಗೆ ಆಗಮಿಸಿದ ಅಧ್ಯಕ್ಷರನ್ನು ಇಲ್ಲಿನ ಪಕ್ಷದ ಕಚೇರಿಯಲ್ಲಿ ಸ್ವಾಗತಿಸಿದ ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೋಮವಾರಪೇಟೆಯಲ್ಲಿ ದುಷ್ಕರ್ಮಿಗಳಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೊಲೆ ಯತ್ನ, ಹಲ್ಲೆ ನಡೆದಿದ್ದರೂ ಸಹ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಲ್ಲೆಕೋರರ ಪರ ವಕಾಲತ್ತು ವಹಿಸುವದು ಖಂಡನೀಯ. ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜವನ್ನು ಒಡೆಯುವ ಯತ್ನಕ್ಕೆ ಮುಂದಾಗಿದೆ. ಈ ಕುತಂತ್ರದ ಭಾಗವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ. ಪೊಲೀಸ್ ಇಲಾಖೆ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸಿದರೆ ಜಿಲ್ಲಾದ್ಯಂತ ಹೋರಾಟ ಸಂಘಟಿಸಲಾಗುವದು. ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದಲ್ಲಿ ಶಾಶ್ವತವಲ್ಲ ಎಂಬದನ್ನು ತಿಳಿದುಕೊಳ್ಳಲಿ ಎಂದು ಮನು ಮುತ್ತಪ್ಪ ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾ.ಪಂ. ಸದಸ್ಯ ಅಭಿಮನ್ಯುಕುಮಾರ್ ಅವರ ಭಾಷಣದಲ್ಲಿ ಯಾವದೇ ಪ್ರಚೋದನಕಾರಿ ಅಂಶಗಳಿಲ್ಲದಿದ್ದರೂ ಮೊಕದ್ದಮೆ ದಾಖಲಿಸಿರುವದು ಖಂಡನೀಯ ಎಂದು ಹೇಳಿದ ಮನುಮುತ್ತಪ್ಪ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಹಿಂದೂ ಸಮಾಜದ ಮೇಲಿನ ದಬ್ಬಾಳಿಕೆ ತಡೆಯುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಯಾವದೇ ಹೋರಾಟಗಳಿಗೆ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮನೆಗಳಿಗೂ ತಲಪಿಸಬೇಕು. ಮುಂದಿನ ಚುನಾವಣೆಗಳಿಗೆ ಪಕ್ಷ ಇನ್ನಷ್ಟು ಸಂಘಟಿತವಾಗಬೇಕು. ದೇಶಾದ್ಯಂತ ಕಾಂಗ್ರೆಸ್ ಮುಕ್ತ ಪರ್ವಕಾಲ ಆರಂಭವಾಗಿದ್ದು, ಕರ್ನಾಟಕದಿಂದಲೂ ಕಾಂಗ್ರೆಸ್ ಮುಕ್ತಗೊಳ್ಳಲು ಪ್ರತಿ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಮನು ಮುತ್ತಪ್ಪ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಪಕ್ಷ 150 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮೋರ್ಚಾ, ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು, ನಗರ ಬಿಜೆಪಿ, ಶಿವಾಜಿ ಸೇನೆಯ ಪದಾಧಿಕಾರಿಗಳು ಸೇರಿದಂತೆ ಇತರರು ನೂತನ ಅಧ್ಯಕ್ಷರಿಗೆ ಹೂಹಾರ ಹಾಕಿ ಸ್ವಾಗತ ಕೋರಿದರು.

ಈ ಸಂದರ್ಭ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ, ವಕ್ತಾರ ಅಭಿಮನ್ಯುಕುಮಾರ್, ಉಪಾಧ್ಯಕ್ಷರಾದ ಉಷಾ ತೇಜಸ್ವಿ, ಶಿವಪ್ಪ, ನಗರಾಧ್ಯಕ್ಷ ಸೋಮೇಶ್, ಯುವ ಮೋರ್ಚಾ ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.