ಮಡಿಕೇರಿ, ಅ. 26: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್‍ಪೂರ್ವ ವಿದ್ಯಾರ್ಥಿ ನಿಲಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಒದಗಿಸಬೇಕಾದ ಅಗತ್ಯ ಸೌಲಭ್ಯ ಹಾಗೂ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಚರ್ಚಿಸಿ ವಿದ್ಯಾರ್ಥಿ ನಿಲಯಗಳಿಗೆ ಸಮನ್ವಯಾಧಿಕಾರಿ ನೇಮಕಕ್ಕೆ ಕ್ರಮಕೈಗೊಳ್ಳುವಂತೆ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಸಮಿತಿ ಅಧ್ಯಕ್ಷ ಜೆ.ಆರ್. ಲೋಬೋ ಅವರು ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರಿಗೆ ಸೂಚಿಸಿದರು.

ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೆಟ್ರಿಕ್‍ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಕಲಿತು ಹತ್ತನೇ ತರಗತಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಕೆಲವು ಕಡೆ ಉತ್ತಮ ಫಲಿತಾಂಶ ಬಂದಿಲ್ಲ ಎಂಬ ಕಾರಣಕ್ಕಾಗಿ ಲೋಬೋ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಬಿಸಿಎಂ ಅಧಿಕಾರಿ ಸುರೇಶ್ ಅವರು ವಿದ್ಯಾರ್ಥಿ ನಿಲಯಗಳಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದರು. ಈ ಹಿನ್ನೆಲೆಯಲ್ಲಿ ಕೆಲಕಾಲ ಚರ್ಚೆ - ವಿಚರ್ಚೆ ನಡೆದು ಕೊನೆಗೆ ಸಮನ್ವಯಾಧಿಕಾರಿ ನೇಮಕಕ್ಕೆ ಸೂಚಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ನಡುವೆ ಹೊಂದಾಣಿಕೆ ಕೊರತೆಯಿದ್ದು, ಬಹಿರಂಗವಾಯಿತು. ಎರಡು ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಲೋಬೋ ನಿರ್ದೇಶನ ನೀಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಆಗಲೇಬೇಕು ಇಲ್ಲವಾದರೆ ಅದಕ್ಕೆ ಕ್ಷಮೆ ನೀಡುವದಿಲ್ಲ ಎಂದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಲ್ಲಿರುವ ಸಾಲ ಯೋಜನೆಗೆ ಅರ್ಜಿಗಳು ಬರುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಸಾಲ ಯೋಜನೆ ಅರ್ಜಿಗಳು ಬರುತ್ತಿಲ್ಲವೆಂದಾದರೆ ಕೊಡಗಿನಲ್ಲಿರು ವವರೆಲ್ಲರೂ ಶ್ರೀಮಂತರೇ? ಎಂದು ಸಮಿತಿಯ ಸದಸ್ಯ ಎಂ.ಡಿ. ಲಕ್ಷ್ಮಿ ನಾರಾಯಣ ಅವರು ಅಧಿಕಾರಿಯನ್ನು ಪ್ರಶ್ನಿಸಿದರು. ಸಾಲ ಯೋಜನೆಗೆ ಸೂಕ್ತ ಸ್ಪಂದನ ಸಿಗದಿರಲು ಪ್ರಚಾರದ ಕೊರತೆ ಕಾರಣವಾಗಿದ್ದು, ಸೂಕ್ತ ಪ್ರಚಾರ ನೀಡಿ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.

ಕೊಡಗಿನಲ್ಲಿ ಒಟ್ಟು 385 ವಕ್ಫ್ ಆಸ್ತಿಗಳನ್ನು ಸರ್ವೆ ಮಾಡಲಾಗಿದ್ದು, ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. 18 ಕಡೆಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ವಕ್ಫ್ ಅಧಿಕಾರಿ ಹೇಳಿದರು. ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ವಿಲೇವಾರಿ ಮಾಡುವಂತೆ ಲೋಬೋ ಅವರು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಸೂಚಿಸಿದರು.

ಸರ್ಕಾರ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಸರ್ಕಾರದ ಕಾರ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಲಹೆ ಪಡೆದು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಪ್ರಗತಿ ಸಾಧ್ಯ ಎಂದು ವಿಧಾನ ಮಂಡಳದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸಿದ್ದಲ್ಲಿ ಶೇ.75ರಷ್ಟು ಜನರಿಗೆ ಕಾರ್ಯಕ್ರಮಗಳು ಎಟುಕಿ ದಂತಾಗುತ್ತದೆ ಎಂದರು. ವಿದ್ಯಾರ್ಥಿ ನಿಲಯಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವದರ ಜೊತೆಗೆ ಪೌಷ್ಠಿಕ ಆಹಾರ ಒದಗಿಸುವದು, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಷ್ಯವೇತನ ತಲುಪಬೇಕು. ಯಾವದೇ ಕಾರಣಕ್ಕೂ ಶಿಷ್ಯವೇತನ ನೀಡುವಲ್ಲಿ ವಿಳಂಬ ಮಾಡಬಾರದು.

ಹಾಗೆಯೇ ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ, ಕೇಂದ್ರ ಪುರಸ್ಕøತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಫೆಲೋಶಿಪ್ ಮತ್ತಿತರ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಜೆ.ಆರ್.ಲೋಬೋ ನಿರ್ದೇಶನ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಮುದಾಯ ಭವನ ಕಾಮಗಾರಿ ಪ್ರಗತಿ, ಶಾದಿ ಮಹಲ್‍ಗಳ ನಿರ್ಮಾಣ, ಚರ್ಚ್ ನವೀಕರಣ ಮತ್ತು ದುರಸ್ತಿ ಪ್ರಗತಿ ಮತ್ತಿತರ ಸಂಬಂಧ ಮಾಹಿತಿ ಪಡೆದು ಶೇಕಡಾವಾರು ಗುರಿ ಸಾಧನೆಗೆ ನಿರ್ದೇಶನ ನೀಡಿದರು.

ಸಮಿತಿ ಸದಸ್ಯರಾದ ಮಂಕಾಳ ಸುಬ್ಬ ವೈದ್ಯ ಅವರು ಮಾತನಾಡಿ ಬಡ ಜನರಿಗೆ ನ್ಯಾಯ ಒದಗಿಸುವದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.

ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಕಿರುಸಾಲ ಮತ್ತಿತರ ಯೋಜನೆಗಳಡಿ ಅರ್ಜಿಗಳು ಬಾರದಿರುವದರ ಸಂಬಂಧ ತಳಮಟ್ಟದಲ್ಲಿ ವ್ಯಾಪಕ ಮಾಹಿತಿ ನೀಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಸದಸ್ಯರಾದ ಯು.ಬಿ.ಬಣಕಾರ್ ಅವರು ಇಲಾಖೆಗಳ ಅಂಕಿ ಅಂಶಗಳು ನಿಖರವಾಗಿರಬೇಕು. ಸರ್ಕಾರದ ಯೋಜನೆಗಳನ್ನು ತಲುಪಿಸಿದಾಗ ಮಾತ್ರ ಅಭಿವೃದ್ಧಿ ಮತ್ತು ಪ್ರಗತಿ ಕಾಣಲು ಸಾಧ್ಯ ಎಂದರು.

ಸಮಿತಿ ಸದಸ್ಯರಾದ ಅಬ್ದುಲ್ ಜಬ್ಬಾರ್ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಇರುವ ಕಾರ್ಯಕ್ರಮಗಳ ಪ್ರಗತಿ ಸಾಧಿಸುವದು ಮತ್ತು ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತಿತರ ಸಂಬಂಧ ಮಾಹಿತಿ ಪಡೆದರು.

ಸಮಿತಿ ಸದಸ್ಯರಾದ ಸತೀಶ್ ಕೃಷ್ಣ ಸೈಲ್, ಶಾರದಾ ಪೂರ್ಯ ನಾಯ್ಕ, ಕೆ.ಎಂ.ತಿಮ್ಮರಾಯಪ್ಪ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವದು, ಪ್ರಗತಿ ಸಾಧಿಸುವ ಸಂಬಂಧ ಹಲವು ಸಲಹೆ ನೀಡಿದರು.

ಸಮಿತಿ ಉಪ ಕಾರ್ಯದರ್ಶಿ ಅಂಬಾ, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಏಕಾಂತಪ್ಪ, ವಸತಿ ಶಿಕ್ಷಣ ಸಂಸ್ಥೆಗಳ ಜಂಟಿ ನಿರ್ದೇಶಕರಾದ ದೇವರಾಜು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಗದೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚೆನ್ನರಸೇ ಗೌಡ ಇತರರು ತಮ್ಮ ಇಲಾಖಾ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು.