ಕುಶಾಲನಗರ, ಡಿ. 5: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಭತ್ತ ಕೃಷಿಗೆ ತಕ್ಷಣ ನೀರು ಬಿಡಲು ಸರಕಾರ ಕ್ರಮ ಕೈಗೊಳ್ಳಬೇಕು. ಅಥವಾ ಎಕರೆಗೆ 25 ಸಾವಿರ ರೂ.ಗಳ ಪರಿಹಾರ ಸರಕಾರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಹೂಡುವದಾಗಿ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ.

ಅವರು ಕುಶಾಲನಗರದ ಹಾರಂಗಿ ಯೋಜನಾ ವೃತ್ತದ ಕಚೇರಿ ಮುಂಭಾಗ ಕಳೆದ 1 ವಾರದಿಂದ ಪ್ರತಿಭಟನೆಯಲ್ಲಿ ತೊಡಗಿರುವ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪಿರಿಯಾಪಟ್ಟಣ, ಕೆಆರ್ ನಗರ ಭಾಗದ ರೈತರನ್ನು ಉದ್ದೇಶಿಸಿ ಮಾತನಾಡಿ, ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಯಾವದೇ ಸ್ಪಂದನ ದೊರಕದಿರುವ ಬಗ್ಗೆ ಆಕ್ರೋಷÀ ವ್ಯಕ್ತಪಡಿಸಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ 27 ಸಾವಿರ ಎಕರೆ ಭತ್ತ ಕೃಷಿಗೆ 5 ದಿನಗಳ ಕಾಲ ನೀರಿನ ಅವಶ್ಯಕತೆಯಿದೆ. ನೀರಿನ ಕೊರತೆಯಿಂದ ಭತ್ತ ಸಂಪೂರ್ಣ ನಾಶ ಹೊಂದುವ ಪರಿಸ್ಥಿತಿ ಉಂಟಾಗಿದೆ. ತಕ್ಷಣ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೆ ಹಾರಂಗಿ ಯೋಜನಾ ವ್ಯಾಪ್ತಿಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಮಂಗಳವಾರ ಮೈಸೂರಿಗೆ ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮವಿದ್ದು ಮತ್ತೆ ಮನವಿ ಮಾಡಲಾಗುವದು. ಸ್ಪಂದಿಸದಿದ್ದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಪಿರಿಯಾಪಟ್ಟಣ ಜೆಡಿಎಸ್ ಮುಖಂಡ ಕೆ.ಮಹದೇವ್ ಇದ್ದರು.