ಕುಶಾಲನಗರ, ಸೆ 27: ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆ ಹಿನ್ನೆಲೆಯಲ್ಲಿ ಅಣೆಕಟ್ಟೆಯಲ್ಲಿ 10 ಅಡಿಗಳಷ್ಟು ನೀರು ಏರಿಕೆ ಕಂಡುಬಂದಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಅಧಿಕಗೊಂಡಿದ್ದು, ಮಂಗಳವಾರದ ವೇಳೆಗೆ 4 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಹರಿದು ಬರುತ್ತಿದೆ. ಹಿನ್ನೀರು ಭಾಗದಲ್ಲಿ 35 ರಿಂದ 40 ಮಿ.ಮೀ. ಪ್ರಮಾಣದ ಮಳೆ ಸುರಿದಿದ್ದು, ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ 5 ದಿನಗಳ ಅವಧಿಯಲ್ಲಿ 3 ಟಿಎಂಸಿ ಪ್ರಮಾಣದ ನೀರು ಬಂದಿರುವದಾಗಿ ಹಾರಂಗಿ ಅಣೆಕಟ್ಟೆ ವಿಭಾಗದ ಉಸ್ತುವಾರಿ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಕಳೆದ 5 ದಿನಗಳ ಅವಧಿಯಲ್ಲಿ ಸುಂಟಿಕೊಪ್ಪ, ಮಾದಾಪುರ, ಮಡಿಕೇರಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದ್ದು ಒಳಹರಿವು ಅಧಿಕಗೊಂಡಿತ್ತು.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ದಿಂದ ನದಿಗೆ ಹಾಗೂ ಕಾಲುವೆಗೆ ಒಟ್ಟು 3 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿತ್ತು. ಈ ತಿಂಗಳ 23 ರಿಂದ ಜಲಾಶಯದಿಂದ ಹೊರಹರಿವು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಜಲಾಶಯದ ನೀರಿನ ಸಂಗ್ರಹ ಮಟ್ಟ 2850.35 ಅಡಿಗಳಾಗಿದೆ. ಜಲಾಶಯ ದಲ್ಲಿ ಬಳಕೆ ಮಾಡಬಹುದಾದ ನೀರಿನ ಪ್ರಮಾಣ 5.2 ಟಿಎಂಸಿ ಇರುವದಾಗಿ ನಾಗರಾಜ್ ತಿಳಿಸಿದ್ದಾರೆ.