ಕುಶಾಲನಗರ, ಸೆ 26: ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಸ್ಥಿತಿಗತಿಗಳ ಅಧ್ಯಯನ ಮಾಡಲು ಎರಡು ದಿನಗಳ ಪ್ರವಾಸ ಕೈಗೊಂಡ ಮಾಧ್ಯಮ ತಂಡ ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಹಾರಂಗಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡದೆ ನೇರವಾಗಿ ಕೆಆರ್‍ಎಸ್‍ಗೆ ತೆರಳಿ ರೈತರನ್ನು ಬೆಸ್ತು ಬೀಳಿಸಿದ ಘಟನೆ ವರದಿಯಾಗಿದೆ. ಜಲಸಂಪನ್ಮೂಲ ಇಲಾಖೆ ಬೆಂಗಳೂರಿನಿಂದ ಎರಡು ಬಸ್‍ಗಳ ಮೂಲಕ ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರುಗಳ ತಂಡವನ್ನು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕಾವೇರಿ ಕಣಿವೆಯ 4 ಜಲಾಶಯಗಳ ವ್ಯಾಪ್ತಿಗೆ ಕರೆದೊಯ್ದು ಅಲ್ಲಿನ ವಾಸ್ತವ ಸ್ಥಿತಿಗತಿಗಳ ಬಗ್ಗೆ ಅರಿಯುವ ಪ್ರಯತ್ನ ಇದಾಗಿತ್ತು.

ಭಾನುವಾರ ಬೆಂಗಳೂರಿನಿಂದ ಹೊರಟ ತಂಡ ಹಾಸನದ ಯಗಚಿ, ಗೊರೂರು, ಹೇಮಾವತಿ ಜಲಾಶಯ ವೀಕ್ಷಿಸಿ ಅಲ್ಲೇ ವಾಸ್ತವ್ಯ ಹೂಡಿ ನಂತರ ಸೋಮವಾರ ಹಾರಂಗಿ ಜಲಾಶಯ ವೀಕ್ಷಣೆ ಮಾಡುವದರೊಂದಿಗೆ ಅಚ್ಚುಕಟ್ಟು ಪ್ರದೇಶದ ರೈತರ ಸ್ಥಿತಿಗತಿಗಳ ಅಧ್ಯಯನ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಸೋಮವಾರ 11 ಗಂಟೆಗೆ ಹಾರಂಗಿಗೆ ಬರುವ ಕಾರ್ಯಕ್ರಮದ ಹಿನೆÀ್ನಲೆಯಲ್ಲಿ ಅಧಿಕಾರಿಗಳು, ಸ್ಥಳೀಯ ರೈತರು ಹಾಗೂ ಪತ್ರಿಕಾ ಪ್ರತಿನಿಧಿಗಳು ಕಾದು ಸುಸ್ತಾಗಿ ಹಿಂದಿರುಗುವ ಪರಿಸ್ಥಿತಿ ಉಂಟಾಯಿತು. ಗೊರೂರು ಅಣೆಕಟ್ಟೆಯಿಂದ ಹೊರಡಲು ವಿಳಂಭವಾದ ಹಿನೆÀ್ನಲೆಯಲ್ಲಿ ಹಾರಂಗಿಗೆ ಬರಲಾಗಲಿಲ್ಲ ಎಂದು ಹಾರಂಗಿ ಅಣೆಕಟ್ಟೆಯ ಉಸ್ತುವಾರಿ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.

ತಡವಾಗಿ ಬಂದ ಸುದ್ದಿಯಂತೆ ಮಾಧ್ಯಮ ತಂಡ ಗೊರೂರಿನಿಂದ ನೇರವಾಗಿ ಮೈಸೂರು ಕೆಆರ್‍ಎಸ್‍ಗೆ ತೆರಳಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದು ಇತ್ತ ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದ ತಮ್ಮ ಬೆಳೆಹಾನಿ ಬಗ್ಗೆ ರಾಜ್ಯದ ಮಾಧ್ಯಮ ತಂಡ ಹಾಗೂ ಹಿರಿಯ ಅಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಳ್ಳಲು ಕಾತರದಿಂದ ಕಾದ ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಪೆಚ್ಚುಮೋರೆ ಹಾಕಬೇಕಾದ ಪರಿಸ್ಥಿತಿ ಕಂಡುಬಂತು.