ಕುಶಾಲನಗರ, ಜು. 23: ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾರಂಗಿ ಉದ್ಯಾನವನಕ್ಕೆ ಇಂದು ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಚಾಲನೆ ನೀಡಿದ್ದಾರೆ. ಈ ಮೂಲಕ ಕಳೆದ 2 ದಶಕಗಳಿಂದ ಅಧಿಕ ಸಮಯದಿಂದ ನಿಷೇಧಿತ ಪ್ರದೇಶವಾದ ಹಾರಂಗಿ ಜಲಾಶಯ ಆವರಣಕ್ಕೆ ಸಾರ್ವ ಜನಿಕರಿಗೆ ಪ್ರವೇಶ ಕಲ್ಪಿಸಿದಂತಾಗಿದೆ.ಹಾರಂಗಿ ಉದ್ಯಾನವನ ಇದೀಗ 13 ಫೌಂಟೇನ್‍ಗಳನ್ನು ಹೊಂದಿದ್ದು ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಯಾವದೇ ಮಾಹಿತಿಯಿಲ್ಲದೆ ದಿಢೀರನೆ ಉದ್ಯಾನವನಕ್ಕೆ ಚಾಲನೆ ನೀಡಿದ್ದು ಎಲ್ಲರಿಗೂ ಆಶ್ಚರ್ಯ ತಂದಿರುವ ವಿಷಯವಾಗಿದೆ. ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಚಿವರೊಂದಿಗೆ ಹಾರಂಗಿಗೆ ಆಗಮಿಸಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಉಸ್ತುವಾರಿ ಸಚಿವರೊಂದಿಗೆ ಹಾರಂಗಿ ಉದ್ಯಾನವನವನ್ನು ತಕ್ಷಣ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿರುವದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಉದ್ಯಾನವನಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, 3 ತಿಂಗಳ ಕಾಲ ಜನರಿಗೆ ಉದ್ಯಾನವನ ವೀಕ್ಷಣೆಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗುವದು. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಶುಲ್ಕ ವಿಧಿಸುವ ಬಗ್ಗೆ ನಿಗಮದ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಲಾಗುವದು ಎಂದು ಮಾಹಿತಿ ನೀಡಿದ್ದಾರೆ. ಹಾರಂಗಿ ಉದ್ಯಾನವನದಲ್ಲಿ ರೂ. 2.48 ಕೋಟಿ ವೆಚ್ಚದಲ್ಲಿ ಮ್ಯೂಸಿಕಲ್ ಫೌಂಟೇನ್ ಯೋಜನೆಗೆ ಸಧ್ಯದಲ್ಲಿಯೇ ಟೆಂಡರ್ ಆಹ್ವಾನಿಸಲಾಗುವದು ಎಂದ ಸಚಿವರು ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದರು.

ಶಾಸಕ ರಂಜನ್ ಮಾತನಾಡಿ, ಜಿಲ್ಲೆಯ ಪ್ರವಾಸಿ ಕೇಂದ್ರಗಳ ಪಟ್ಟಿಗೆ ಮತ್ತೆ ಹಾರಂಗಿ ಜಲಾಶಯ ಸೇರ್ಪಡೆಗೊಂಡಿದ್ದು ಪ್ರವಾಸಿಗರು ಇದರ ಸದುಪಯೋಗ ಪಡೆಯು ವಂತಾಗಬೇಕೆಂದರು.

ರಾಜ್ಯದಲ್ಲಿ ತಮ್ಮ ಸರಕಾರದ ಅವಧಿಯಲ್ಲಿ ಉದ್ಯಾನವನಕ್ಕೆ ಚಾಲನೆ ನೀಡಿದ್ದು ಇದೀಗ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಈ ಕೇಂದ್ರದ ಮೂಲಕ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತ್ ಸದಸ್ಯರುಗಳಾದ ಕೆ.ಆರ್.ಮಂಜುಳಾ, ಶ್ರೀನಿವಾಸ್, ಕೆ.ಪಿ.ಚಂದ್ರಕಲಾ, ಲತೀಫ್, ಜಿಲ್ಲಾಧಿಕಾರಿ ಡಾ.ವಿ.ಆರ್.ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಉಪವಿಭಾಗಾಧಿಕಾರಿ ಡಾ.ನಂಜುಂಡೇ ಗೌಡ, ತಾಲೂಕು ತಹಶೀಲ್ದಾರ್ ಶಿವಪ್ಪ, ಸ್ಥಳೀಯ ಜನಪ್ರತಿನಿಧಿಗಳು, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಬಿ. ಶಿವಶಂಕರ್, ಅಧೀಕ್ಷಕ ಅಭಿಯಂತರ ಮಹೇಶ್, ಕಾರ್ಯಪಾಲಕ ಅಭಿಯಂತರ ಎಸ್.ಇ.ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು, ನಾಗರಾಜು ಮತ್ತಿತರರು ಇದ್ದರು.