ಕೂಡಿಗೆ, ಸೆ. 30: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯದಿಂದ ಕಳೆದ ಮೂರು ತಿಂಗಳುಗಳಿಂದ ಮೂರು ಜಿಲ್ಲೆಗಳ ರೈತರುಗಳಿಗೆ ಅನುಕೂಲವಾಗುವಂತೆ ನಾಲೆಯಿಂದ 1900 ಕ್ಯೂಸೆಕ್ ನೀರನ್ನು ಹರಿಸಲಾದ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗವಾದ ಶಿರಂಗಾಲ ಹಾಗೂ ಪಕ್ಕದ ಜಿಲ್ಲೆಯವರು ಪರದಾಡುವಂತಾಗಿದೆ. ಸಾವಿರಾರು ಎಕರೆ ಪ್ರದೇಶಗಳಲ್ಲಿ ಭತ್ತದ ನಾಟಿ ಕಾರ್ಯವನ್ನು ಮಾಡಿ ಮೂರು ತಿಂಗಳುಗಳು ಕಳೆದಿದ್ದು, ನಾಟಿ ಕೆಲಸಕ್ಕೆ ವಿವಿಧ ಸಹಕಾರ ಸಂಘಗಳಿಂದ ರೈತರು ಲಕ್ಷಗಟ್ಟಲೇ ತಮ್ಮ ಜಮೀನಿನ ದಾಖಲಾತಿಗಳನ್ನು ಒದಗಿಸಿ, ಸಾಲ ಪಡೆದು ನಾಟಿ ಕಾರ್ಯ ಮುಗಿಸಿದ್ದಾರೆ.
ಹಾರಂಗಿ ಜಲಾಶಯದಿಂದ ಮುಖ್ಯ ನಾಲೆಗೆ ನೀರು ಹರಿಸುವ ವಿಚಾರವಾಗಿ ಸ್ಥಳೀಯ ನೀರು ಬಳಕೆದಾರರ ಸಂಘದ ಅಧ್ಯಕ್ಷರನ್ನಾಗಲೀ ಅಥವಾ ರೈತರುಗಳಿಗೆ ಯಾವದೇ ಬೆಳೆಯನ್ನು ಬೆಳೆಯಬೇಕೆಂಬ ಸೂಚನೆ ನೀಡದೆ ಮೇಲ್ಮಟ್ಟದಲ್ಲಿ ಸಭೆ ನಡೆಸಿ ಇದ್ದಕ್ಕಿದ್ದಂತೆಯೇ ರೈತರಿಗೂ ಮುನ್ಸೂಚನೆ ನೀಡದೇ ನಾಲೆಗೆ ನೀರಿ ಹರಿಸಿದ ಪರಿಣಾಮ ಈ ಸಾಲಿನಲ್ಲಿ ಒಂದು ದುರ್ಘಟನೆಯೂ ನಡೆಯಿತು. ಆದರೆ, ಈಗಾಗಲೇ ಭತ್ತದ ಬೆಳೆಯು ಕಾಯಿಕಟ್ಟುವ ಸಂದರ್ಭ ರಾಜ್ಯ ಸರ್ಕಾರದ ಸೂಚನೆ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸುವ ಉದ್ದೇಶದಿಂದ ಕಡಿಮೆ ಮಟ್ಟದಲ್ಲಿದ್ದ ಹಾರಂಗಿ ಜಲಾಶಯದಿಂದ ಈಗಾಗಲೇ ನೀರನ್ನು ನದಿಗೆ ಹರಿಸಿದ ಪರಿಣಾಮ ಇದೀಗ 3.3 ಟಿಎಂಸಿ ನೀರು ಜಲಾಶಯದಲ್ಲಿದ್ದು, ಈ ನೀರನ್ನು ನಾಲೆಗೆ ಹರಿಸದೇ ಸ್ಥಗಿತಗೊಳಿಸಿರುವದರಿಂದ ಹಾರಂಗಿ ಅಚ್ಚಕಟ್ಟು ಪ್ರದೇಶದ ರೈತರು ಮುಖ್ಯ ನಾಲೆಯಿಂದ ನೀರು ಉಪ ಕಾಲುವೆಗಳ ಮೂಲಕ ಹರಿದು ಬರದಿದ್ದರಿಂದ ತಮ್ಮ ಗದ್ದೆಗಳಿಗೆ ನೀರನ್ನು ಹರಿಸಲು ಪರದಾಡುವಂತಹ ಪ್ರಸಂಗ ಎದುರಾಗಿದೆ.
ರಾಜ್ಯ ಸರ್ಕಾರ ವಿಶೇಷ ಅಧಿವೇಶದ ಸಂದರ್ಭ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನೀರು ಕುಂಠಿತವಾಗಿರುವದರಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಪಟ್ಟಣ ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಾಗಿ ಮಾತ್ರ ಈಗಿರುವ ನೀರನ್ನು ಬಳಸುವಂತೆ ತೀರ್ಮಾನ ಕೈಗೊಂಡಿದೆ.
ಆದರೆ, ಇದ್ದ ನೀರನ್ನು ಹಾರಂಗಿಯ ಜಲಾಶಯದ ಮೂಲಕ ಕೆಆರ್‍ಎಸ್‍ಗೆ ಹರಿಬಿಟ್ಟು, ಇದೀಗ ರೈತರು ಆಕಾಶದತ್ತ ಮುಖಮಾಡಿ ಕೂರುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಶ್ರೀ ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷರು ಹಾಗೂ ರೈತರು ತಿಳಿಸಿದ್ದಾರೆ. ಸರಕಾರ ಜಿಲ್ಲೆಯ ರೈತರ ಕಷ್ಟ-ನಷ್ಟವನ್ನು ಅರಿತುಕೊಳ್ಳದೇ ಜಿಲ್ಲೆಯ ಚಿಕ್ಕ ಅಣೆಕಟ್ಟೆಯಾದ ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಿರುವದು ಸರಿಯಾದ ಕ್ರಮವಲ್ಲ ಎಂದು ಈ ವ್ಯಾಪ್ತಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲೆಗಳ ಮೂಲಕ ನೀರನ್ನು ಹರಿಸದಿದ್ದಲ್ಲಿ ಭತ್ತದ ಬೆಳೆಯು ಒಣಗಿ ಕಾಳುಕಟ್ಟದೆ ನಾಶಗೊಂಡರೆ ಇತ್ತ ಜೀವನಕ್ಕೂ ಕಷ್ಟ, ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಅಸಾಧ್ಯವಾಗುವದರಿಂದ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ರೈತರ ಕಷ್ಟಗಳಿಗೆ ಸ್ಪಂದಿಸಿ, ಹಾರಂಗಿಯಲ್ಲಿ ರೈತರ ಹಾಗೂ ಅಧಿಕಾರಿಗಳ ಸಭೆ ಕರೆದು ರೈತರಿಗೆ ಅನುಕೂಲವಾಗುವಂತಹ ಸಂದರ್ಭವನ್ನು ನಿರ್ಮಾಣಗೊಳಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಹಾರಂಗಿ ಅಧೀಕ್ಷಕ ಅಭಿಯಂತರ ರಂಗಸ್ವಾಮಿ ಮಾತನಾಡಿ, ಮೇಲಿನಿಂದ ಆದೇಶ ಹೊರಡಿಸಿರುವದರಿಂದ ಕಳೆದ 5 ದಿನಗಳಿಂದ ನಾಲೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ ಎಂದರು. - ಕೆ.ಕೆ. ನಾಗರಾಜ ಶೆಟ್ಟಿ.