ಸೋಮವಾರಪೇಟೆ, ನ. 20: ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಇಲಾಖೆ, ಯುವ ಒಕ್ಕೂಟ ಸೇರಿದಂತೆ ಸಮೀಪದ ಹಾನಗಲ್ಲು-ಶೆಟ್ಟಳ್ಳಿ ಗ್ರಾಮದ ಚಂದ್ರೋದಯ ಯುವಕ ಸಂಘ ಹಾಗೂ ಸರಸ್ವತಿ ಯುವತಿ ಮಂಡಳಿ ಆಶ್ರಯದಲ್ಲಿ ಹಾನಗಲ್ಲು-ಶೆಟ್ಟಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಯುವಜನ ಮೇಳ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಎಂ.ಬಿ. ಜೋಯಪ್ಪ ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 400ಕ್ಕೂ ಅಧಿಕ ಯುವಕ ಹಾಗೂ ಯುವತಿ ಮಂಡಳಿಗಳಿದ್ದು, ಹಲವು ಸಂಘಗಳು ನಿಷ್ಕ್ರಿಯವಾಗಿವೆ. ಇಂತಹ ಸಂಘಗಳಿಗೆ ಮರು ಜೀವ ನೀಡುವ ಉದ್ದೇಶದಿಂದ ಯುವ ಒಕ್ಕೂಟ ಕಾರ್ಯೋನ್ಮುಖವಾಗಲಿದೆ. ಮುಂದಿನ ದಿನಗಳಲ್ಲಿ 50 ಸಂಘಗಳಿಗೆ ತಲಾ 2 ಸಾವಿರದಂತೆ ಕ್ರೀಡಾಪರಿಕರ ವಿತರಿಸಲಾಗುವದು ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಟೀಚರ್ ಮಾತನಾಡಿ, ಸೃಜನಾತ್ಮಕ ಕಲೆಗಳನ್ನು ಬಿಂಬಿಸಲು ಇಂತಹ ವೇದಿಕೆಗಳು ಸಹಕಾರಿ ಯಾಗಿದ್ದು, ಯುವಜನ ಮೇಳದಲ್ಲಿ ಗ್ರಾಮೀಣ ಭಾಗದ ಸಂಸ್ಕøತಿ ಮೇಳೈಸಲು ಸಾಧ್ಯವಾಗುತ್ತದೆ. ಚಂದ್ರೋದಯ ಯುವಕ ಸಂಘದವರು ಇಂತಹ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸುತ್ತಿರುವದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರೋದಯ ಯುವಕ ಸಂಘದ ಅಧ್ಯಕ್ಷ ಶೋಭರಾಜ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಸದಸ್ಯ ಯಶ್ವಂತ್ ಕುಮಾರ್, ರಮೇಶ್, ವನಜಾಕ್ಷಿ ತಿಮ್ಮಯ್ಯ, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ವೈ.ಎ. ರವಿ, ತರಬೇತುದಾರ ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.
ಯುವಜನ ಮೇಳದಲ್ಲಿ ತಾಲೂಕು ಯುವ ಒಕ್ಕೂಟದಲ್ಲಿ ನೋಂದಾಯಿ ಸಲ್ಪಟ್ಟಿರುವ ಯುವಕ ಹಾಗೂ ಯುವತಿ ಮಂಡಳಿಗಳ ಸದಸ್ಯರು ಭಾಗವಹಿ ಸಿದ್ದರು. ಕೋಲಾಟ, ರಂಗಗೀತೆ, ಜಾನಪದ ನೃತ್ಯ, ಜಾನಪದ ಗೀತೆ, ರಾಗಿ ಬೀಸುವ ಪದ, ಸೋಬಾನೆ ಪದ, ಗೀಗೀ ಪದ, ಏಕಪಾತ್ರಾಭಿನಯ, ಭಜನೆ ಸೇರಿದಂತೆ ಇತರ ಜಾನಪದೀಯ ಸ್ಪರ್ಧೆಗಳಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸದಸ್ಯರು ಭಾಗವಹಿಸಿದ್ದರು.