ಸಿದ್ದಾಪುರ, ಜು. 15: ಹಾಡಹಗಲೇ ಕಾಡಾನೆಯ ಅಟ್ಟಹಾಸಕ್ಕೆ ಕಾರ್ಮಿಕ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಸಮೀಪದ ಟಾಟಾ ಸಂಸ್ಥೆಯ ಎಮ್ಮೆಗುಂಡಿ ತೋಟದಲ್ಲಿ ನಡೆದಿದೆ.ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಸಮೀಪದ ಟಾಟಾ ಸಂಸ್ಥೆಗೆ ಸೇರಿದ ಎಮ್ಮೆಗುಂಡಿ ತೋಟದಲ್ಲಿ ಘಟನೆ ನಡೆದಿದ್ದು, ಅಲ್ಲಿನ ತೋಟದ ಲೈನ್‍ಮನೆಯಲ್ಲಿ ಕಳೆದ ಒಂದು ವರ್ಷಗಳಿಂದ ವಾಸವಾಗಿದ್ದ ಮೂಲತಃ ಅಸ್ಸಾಂ ರಾಜ್ಯದ ಕಾರ್ಮಿಕ ಮುಬಿಧರ್ ಎಂಬವರ ಪತ್ನಿ ಸುಬಿಯ ಬೀಬಿ (45) ಎಂಬವರು ಮೃತ ದುರ್ದೈವಿ. ಎಂದಿನಂತೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ದಿಢೀರನೆ ಧಾಳಿ ನಡೆಸಿದೆ. ಈ ಸಂದರ್ಭ ಭಯಬೀತರಾಗಿ ಓಡಲು ಮುಂದಾದ ಸುಬಿಯಳನ್ನು ಕಾಡಾನೆಯು ಸೊಂಡಿಲಿನಿಂದ ಎತ್ತಿ ಕಾಫಿಗಿಡಕ್ಕೆ ಎಸೆದಿದೆ. ಎಸೆದ ರಭಸಕ್ಕೆ ಅವರ ತಲೆ ಭಾಗಕ್ಕೆ ತೀರ್ವ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿ ರುವದಾಗಿ ಮೃತೆ ಸುಬಿಯರೊಂದಿಗೆ ಕೆಲಸ ಮಾಡುತ್ತಿದ್ದ ಮುನಿಯಮ್ಮ ಶಕ್ತಿಗೆ ತಿಳಿಸಿದ್ದಾರೆ. ಇತರ ಕಾರ್ಮಿಕರು ಇದೇ ಸಂದರ್ಭದಲ್ಲಿ ದಿಕ್ಕಾಪಾಲಾಗಿ ಎದ್ದು ಬಿದ್ದು ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು ಎಂದು ತಿಳಿಸಿದರು. ಅದೃಷ್ಟವಶಾತ್ ಕಾರ್ಮಿಕರು ಓಡಿ ತಪ್ಪಿಸಿಕೊಳ್ಳದಿದ್ದಲ್ಲಿ ನಾಲ್ಕೈದು ಮಂದಿ ಕಾರ್ಮಿಕರು ಕಾಡಾನೆ ಧಾಳಿಗೆ ಬಲಿಯಾಗುವ ಸಾಧ್ಯತೆ ಇತ್ತು ಎಂದು ಕಾರ್ಮಿಕ ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡಾನೆ ಧಾಳಿಗೆ ಸಿಲುಕಿ 3 ಮಂದಿ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಇದರಿಂದಾಗಿ ಕಾರ್ಮಿಕರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತದೇಹ ಸಾಗಿಸಲು ಬಿಡುವದಿಲ್ಲವೆಂದು ಪಟ್ಟು ಹಿಡಿದರು. ಅರಣ್ಯ ಇಲಾಖಾಧಿ ಕಾರಿಗಳು ಪ್ರತಿ ಬಾರಿಯೂ ಕಾರ್ಮಿಕರು ಮೃತಪಟ್ಟ ಸಂದರ್ಭ ಭರವಸೆಯನ್ನು ನೀಡಿ ತೆರಳುತ್ತಾರೆಯೆ ಹೊರತು ಶಾಶ್ವತ ಯೋಜನೆಯನ್ನು ರೂಪಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರ ಲ್ಲದೇ, ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕಂಪೆನಿಯ ತೋಟದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಕಾರ್ಮಿಕರಿಗೆ ಕಾಡಾನೆಗಳಿಂದಾಗುವ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ವೆಂದು ಕಾರ್ಮಿಕರು ಆರೋಪಿಸಿ ದರು. ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಏರು ಧ್ವನಿಯಿಂದಲೇ ಕಾರ್ಮಿಕರು ವಾಗ್ದಾಳಿ ನಡೆಸಿದ್ದು, ಬೆಳಗ್ಗಿನಿಂದಲೇ ಕಾರ್ಮಿಕರು ಹಾಗೂ ಗ್ರಾ.ಪಂ. ಸದಸ್ಯರಾದ ಹುಸೈನ್, ಜಾಫರ್, ಕೃಷ್ಣ ಹಾಗೂ ಲಕ್ಷ್ಮಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬರುವವರೆಗೆ ಸ್ಥಳದಿಂದ ಕದಲುವದಿಲ್ಲವೆಂದು ಬಿಗಿಪಟ್ಟು ಹಿಡಿದರು. ಇವರನ್ನು ಸಮಾಧಾನ ಪಡಿಸಲು ಅಧಿಕಾರಿಗಳು ಹಾಗೂ ಪೊಲೀಸರು ಹರಸಾಹಸ ಪಟ್ಟರು. ಈ ಹಿಂದೆ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ಧನ ಸಿಗಲು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಅಲೆದಾಡಬೇಕಾಯಿತು ಎಂದು ಗ್ರಾ.ಪಂ. ಸದಸ್ಯರು ಆರೋಪಿಸಿದರು.

ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ರಾಜ್ಯ ಸರಕಾರ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ, ಕಾಡಾನೆಯ ಧಾಳಿಗೆ ಸಿಲುಕಿ ಮುಗ್ದ ಕಾರ್ಮಿಕರು ಮೃತಪಡುತ್ತಿದ್ದಾರೆ. ಶಾಸಕರು ಸದನದಲ್ಲಿ ಕಾಡಾನೆ ಹಾವಳಿಗೆ ಶಾಶ್ವತ ಯೋಜನೆ ರೂಪಿಸುವಂತೆ ಒತ್ತಾಯಿಸಿದ್ದರೂ, ಸರಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವದು ಖಂಡನೀಯ. ಛತ್ತೀಸ್‍ಗಡದಲ್ಲಿ ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಿದಂತೆ ಜಿಲ್ಲೆಯಲ್ಲೂ ಶಾಶ್ವತ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ತಾನು ಈ ಬಗ್ಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿರುವದಾಗಿ ತಿಳಿಸಿದರು.

ಸರಿತ ಪೂಣಚ್ಚ ಒತ್ತಾಯ

ಸಿದ್ದಾಪುರ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಒತ್ತಾಯಿಸಿದ್ದಾರೆ. ತೋಟದ ಕಾರ್ಮಿಕರು ಕೆಲಸಕ್ಕೆ ತೆರಳುವ ಮುಂಚಿತವಾಗಿ ಗನ್ ಮ್ಯಾನ್‍ಗಳನ್ನು ನೇಮಿಸ ಬೇಕೆಂದು ಅವರು ತಿಳಿಸಿದರಲ್ಲದೆ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಇಲಾಖೆಯಿಂದ 2 ಲಕ್ಷ ರೂ. ಚೆಕ್ಕನ್ನು ಪರಿಹಾರವಾಗಿ ಮೃತರ ಕುಟುಂಬಕ್ಕೆ ಸ್ಥಳದಲ್ಲೇ ಹಸ್ತಾಂತರಿಸಿದರು. ಸ್ಥಳಕ್ಕೆ ವೀರಾಜಪೇಟೆ ತಾಲೂಕು ಡಿ.ಎಫ್.ಓ ಶಂಕರ್.ಪಿ, ವಲಯ ಅರಣ್ಯ ಅಧಿಕಾರಿ ಗೋಪಾಲ, ದೇವಯ್ಯ, ಠಾಣಾಧಿಕಾರಿ ಬಿ.ಜಿ.ಕುಮಾರ್, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಗ್ರಾ.ಪಂ ಅಧ್ಯಕ್ಷ ಮಣಿ, ಪಿ.ಡಿ.ಓ ವಿಶ್ವನಾಥ್, ಕಾರ್ಮಿಕ ಮುಖಂಡ ಎನ್.ಡಿ.ಕುಟ್ಟಪ್ಪ, ಸ್ಥಾನೀಯ ಸಮಿತಿ ಅಧ್ಯಕ್ಷ ಮನೋಹರ, ಗ್ರಾಮ ಲೆಕ್ಕಿಗ ಮಂಜುನಾಥ್ ಸೇರಿದಂತೆ ಇನ್ನಿತರರು ಇದ್ದರು.

ಹಣ ಬೇಡ

ಮೃತಪಟ್ಟ ಮಹಿಳೆಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವ ಸಂದರ್ಭದಲ್ಲಿ ತಮಗೆ ಹಣ ಬೇಡ. ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ತಲೆ ಕೂದಲನ್ನು ಎಳೆದು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕುರುಹು ಕಂಡುಬಂದಿತು. ಮೃತಪಟ್ಟ ಮಹಿಳೆಯ ಮೃತದೇಹವನ್ನು ಕಂಡು ಪತಿ ಸ್ಥಳದಲ್ಲೇ ಕುಸಿದುಬಿದ್ದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.