ಗೋಣಿಕೊಪ್ಪಲು, ಡಿ.7 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಕಾಲೇಜು ವಿಭಾಗದ ಬಾಲಕರ ಪಂದ್ಯಗಳಲ್ಲಿ 5 ತಂಡಗಳು ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.ಜೂನಿಯರ್ ಕಾಲೇಜು ಪೊನ್ನಂಪೇಟೆ ಎ ತಂಡವು ಭಾರತಿಯ ವಿದ್ಯಾಭವನ ವಿರುದ್ಧ 10-1 ಗೋಲುಗಳ ಗೆಲುವು ಪಡೆಯಿತು. 1, 14, 23 ಹಾಗೂ 37 ನೇ ನಿಮಿಷಗಳಲ್ಲಿ ಪೂವಯ್ಯ 4 ಗೋಲು ಬಾರಿಸಿ ಗೆಲುವಿಗೆ ಪ್ರಮುಖ ಕಾರಣರಾದರು. ಇವರಿಗೆ 29 ಹಾಗೂ 30 ರಲ್ಲಿ ನಾಚಪ್ಪ, 31, 38 ರಲ್ಲಿ ಸೂರ್ಯ, 36 ರಲ್ಲಿ ಅಕ್ಷರ್, 35 ರಲ್ಲಿ ಆಶಿಕ್ ಗೋಲು ಹೊಡೆದು ಭಾರೀ ಅಂತರದ ಗೆಲುವಿಗೆ ಕಾಣಿಕೆ ನೀಡಿದರು. ಪರಾಜಿತ ತಂಡದ ಪರ 10 ನೇ ನಿಮಿಷದಲ್ಲಿ ಥರುಣ್ ಗೋಲು ಹೊಡೆದರು. ಜೂನಿಯರ್ ಕಾಲೇಜು ತಂಡವು ಲಯನ್ಸ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ 3ನೇ ನಿಮಿಷದಲ್ಲಿ ದರ್ಶನ್, 6, 38 ರಲ್ಲಿ ಗೌತಂ, 24 ರಲ್ಲಿ ಧನಿಕ್, 36 ನೇ ನಿಮಿಷದಲ್ಲಿ ಪ್ರಥ್ವಿ ಗೋಲು ಹೊಡೆದರು.

ಕಾಲ್ಸ್ ತಂಡವು ಭಾರತೀಯ ವಿದ್ಯಾಭವನ ತಂಡವನ್ನು 1-0 ಗೋಲುಗಳ ಮೂಲಕ ಸೋಲಿಸಿತು. ಕಾಲ್ಸ್ ಪರ 26 ನೇ ನಿಮಿಷದಲ್ಲಿ ಥಶ್ವಿನ್ ಗೋಲು ಹೊಡೆದರು.

ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಸೆಂಟ್ ಅಲೋಸಿಯೆಸ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸಿತು. ವೀರಾಜಪೇಟೆ ಪರ 35 ರಲ್ಲಿ ಸುಕುನ್, 36 ರಲ್ಲಿ ಪೊನ್ನಣ್ಣ ಗೋಲು ಹೊಡೆದರು. ಅಲೋಸಿಯೆಸ್ ಪರ 23 ರಲ್ಲಿ ಬೋಪಣ್ಣ ಏಕೈಕ ಗೋಲು ಹೊಡೆದರು.

ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ತಂಡದ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿತು. ಕಾವೇರಿ ಕಾಲೇಜು ಪರ 2 ನೇ ನಿಮಿಷದಲ್ಲಿ ಅವಿನಾಶ್, 29 ರಲ್ಲಿ ಶಾನ್, ಕಾರ್ಯಪ್ಪ ತಂಡದ ಪರ 6 ರಲ್ಲಿ ಜೋಯಪ್ಪ ಗೋಲು ಬಾರಿಸಿದರು.