ಗೋಣಿಕೊಪ್ಪಲು, ಡಿ. 8 : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಕಿರಿಯ ಹಾಕಿ ಟೂರ್ನಿಯಲ್ಲಿ ಕಾಲೇಜು, ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ವಿಭಾಗಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೋದಂಡ ಸಿ ಪೂವಯ್ಯ ಜ್ಞಾಪಕಾರ್ಥ ಪ್ರೌಢ ಬಾಲಕರಲ್ಲಿ ಪೊನ್ನಂಪೇಟೆ ವಸತಿ ಕ್ರೀಡಾಶಾಲೆ ಪ್ರಥಮ, ಕೂಡಿಗೆ ವಸತಿ ಕ್ರೀಡಾಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪೊನ್ನಂಪೇಟೆ ತಂಡವು 3-1 ಗೋಲುಗಳಿಂದ ಕೂಡಿಗೆಯನ್ನು ಸೋಲಿಸಿತು. ಪೊನ್ನಂಪೇಟೆ ಪರ 4 ರಲ್ಲಿ ಸೂರ್ಯ, 14 ರಲ್ಲಿ ಆಶಿಕ್, 57 ರಲ್ಲಿ ಫಾವದ್, ಕೂಡಿಗೆ ಪರ ಗಣೇಶ್ ಗೋಲು ಹೊಡೆದರು.

ಬಾಲಕಿಯರಲ್ಲಿ ಮಡಿಕೇರಿ ಸರ್ಕಾರಿ ಶಾಲೆಯು ಪೊನ್ನಂಪೇಟೆ ಸರ್ಕಾರಿ ಶಾಲೆಯನ್ನು 3-1 ರಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ನಡೆದ ಹೈಯರ್ ಪ್ರೈಮರಿ ಬಾಲಕರಲ್ಲಿ ಪೊನ್ನಂಪೇಟೆ ವಸತಿ ಕ್ರೀಡಾ ಶಾಲೆ, ಬಾಲಕಿಯರಲ್ಲಿ ಭಾರತೀಯ ಕೇಂದ್ರೀಯ ವಿದ್ಯಾಲಯ ಚಾಂಪಿಯನ್ ಆಯಿತು.

ಬಾಲಕರ ವಿಭಾಗದಲ್ಲಿ ಪೊನ್ನಂಪೇಟೆ ವಸತಿ ಕ್ರೀಡಾ ಶಾಲೆ ತಂಡವು ಕಾಲ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಪಡೆಯಿತು. ಪೊನ್ನಂಪೇಟೆ ಪರ 9 ನೇ ನಿಮಿಷದಲ್ಲಿ ಗೌತಂ, 27 ರಲ್ಲಿ ಅರ್ಜುನ್ ಗೋಲು ಹೊಡೆದರು. ಪಂದ್ಯ ಸೋತ ಕಾಲ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಿತು.

ಬಾಲಕಿಯರಲ್ಲಿ ಭಾರತೀಯ ಕೇಂದ್ರೀಯ ವಿದ್ಯಾಲಯ ತಂಡವು ರೂಟ್ಸ್ ತಂಡವನ್ನು 5-0 ಗೋಲುಗಳ ಅಂತರದಲ್ಲಿ ಮಣಿಸಿ ಪ್ರಥಮ ಸ್ಥಾನ ಪಡೆಯಿತು. ವಿಜೇತ ವಿದ್ಯಾಲಯ ತಂಡದ ಪರ ರಿಶಿಕಾ ಏಕಾಂಗಿಯಾಗಿ ಪಂದ್ಯ ಗೆದ್ದುಕೊಡುವಲ್ಲಿ ಯಶಸ್ವಿಯಾ ದರು. ಹ್ಯಾಟ್ರಿಕ್ ಸೇರಿ 5 ಗೋಲು ಬಾರಿಸಿದ ರಿಶಿಕಾ ಕ್ರೀಡಾಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾ ದರು. ಮನಮೋಹಕ ಆಟವಾಡಿದ ರಿಶಿಕಾ ಪಂದ್ಯದ 1, 11, 14, 18 ಹಾಗೂ 20 ನಿಮಿಷಗಳಲ್ಲಿ ಗೋಲು ಬಾರಿಸಿದರು.

ನೆಲ್ಲಮಕ್ಕಡ ಈಶ್ವರಿ ಲಾಲಿ ಜ್ಞಾಪಕಾರ್ಥ ಕಾಲೇಜು ಬಾಲಕರಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಶೂಟೌಟ್‍ನಲ್ಲಿ 4-2 ಗೋಲುಗಳಿಂದ ಗೆಲುವು ಪಡೆದ ಗೋಣಿಕೊಪ್ಪ ತಂಡದ ಪರವಾಗಿ 10 ರಲ್ಲಿ ಚಲನ್, ವೀರಾಜಪೇಟೆ ಪರ 18 ರಲ್ಲಿ ಸುಕನ್ ಗೋಲು ಹೊಡೆ ದಿದ್ದರು. 1-1 ಡ್ರಾ ಫಲಿತಾಂಶ ದಿಂದಾಗಿ ಟೈಬ್ರೇಕರ್‍ಗೆ ಮೊರೆ ಹೋಗಲಾಯಿತು.

ಕಾಲೇಜು ಬಾಲಕಿಯರಲ್ಲಿ ಟೆರೇಶಿಯನ್ ತಂಡ ಮಡಿಕೇರಿ ಫೀ. ಮಾ ಕಾರ್ಯಪ್ಪ ಕಾಲೇಜು ವಿರುದ್ಧ 3-1 ಗೋಲುಗಳಿಂದ ಜಯ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡದ ಪರ 12 ನೇ ನಿಮಿಷದಲ್ಲಿ ಸಂಧ್ಯಾ, 16 ರಲ್ಲಿ ರಶ್ಮಿ, 34 ರಲ್ಲಿ ಭವ್ಯ, ಕಾರ್ಯಪ್ಪ ಕಾಲೇಜು ಪರ 18 ನೇ ನಿಮಿಷದಲ್ಲಿ ಸ್ವಪ್ನ ಗೋಲು ಹೊಡೆದರು.

ಅಜ್ಜಮಾಡ ಪೊನ್ನಪ್ಪ, ಸುಳ್ಳಿಮಾಡ ಸುಬ್ಬಯ್ಯ ಹಾಗೂ ವಿನೋದ್ ವೀಕ್ಷಕ ವಿವರಣೆ ನೀಡಿದರು. ತೀರ್ಪುಗಾರರುಗಳಾಗಿ ಬೊಳ್ಳಚಂಡ ನಾಣಯ್ಯ, ಕೊಂಡೀರ ಕೀರ್ತಿ, ಕೋಡಿಮಣಿಯಂಡ ಗಣಪತಿ, ಐಪರವಂಡ ಗಣಪತಿ, ಕುಪ್ಪಂಡ ದಿಲನ್, ಚೋಯಮಾಡಂಡ ಚೆಂಗಪ್ಪ, ಚೆಯ್ಯಂಡ ಅಪ್ಪಚ್ಚು, ಹರಿಣಾಕ್ಷಿ, ನೆರ್ಪಂಡ ಭಾಗ್ಯಶ್ರೀ, ಅನ್ನಡಿಯಂಡ ಪೊನ್ನಣ್ಣ, ಮೊಣ್ಣಪ್ಪ, ದರ್ಶನ್, ವಿನೋದ್ ಕಾರ್ಯನಿರ್ವಹಿಸಿದರು. ಸಮಾರೋಪದಲ್ಲಿ ದಾನಿ ಮಂಡೇಪಂಡ ಬೋಜಮ್ಮ, ಹಾಕಿ ಕೂರ್ಗ್ ಕಾರ್ಯದರ್ಶಿ ಪಳಂಗಡ ಲವಕುಮಾರ್, ಪಂದ್ಯಾವಳಿ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ, ಖಜಾಂಚಿ ಲಾಲಾ ಅಯ್ಯಣ್ಣ, ಸದಸ್ಯ ಕೊಕ್ಕಂಡ ರೋಶನ್ ಪಾಲ್ಗೊಂಡಿದ್ದರು.