ಗೋಣಿಕೊಪ್ಪಲು, ನ. 25: ಹಾತೂರು ಯೂತ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಪಂದ್ಯಾವಳಿಯಲ್ಲಿ ಹಾತೂರು ಯೂತ್ ಕ್ಲಬ್, ಎಎಸ್‍ಸಿ ಅಮ್ಮತ್ತಿ, ಕೋಣನಕಟ್ಟೆ ಹಾಗೂ ಚಾರ್ಮರ್ಸ್ ಮಡಿಕೇರಿ ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ.
ಯುಎಸ್‍ಸಿ ರೆಡ್ ತಂಡ ಗೈರು ಹಾಜರಾದ ಹಿನ್ನೆಲೆಯಲ್ಲಿ ಎಎಸ್‍ಸಿ ಅಮ್ಮತ್ತಿ ಸೆಮಿಗೆ ಪ್ರವೇಶ ಪಡೆಯಿತು. ಕೋಣನಕಟ್ಟೆ ತಂಡವು ಅಮ್ಮತ್ತಿ ಈಗಲ್ಸ್ ತಂಡವನ್ನು ಶೂಟೌನಲ್ಲಿ 6-4 ಗೋಲುಗಳ ಅಂತರದಿಂದ ಮಣಿಸಿತು. 2-2 ಗೋಲುಗಳ ಡ್ರಾ ಫಲಿತಾಂಶದಿಂದಾಗಿ ಶೂಟೌಟ್‍ಗೆ ಮೊರೆ ಹೋಗಲಾಯಿತು. ಈಗಲ್ಸ್ ಪರ 23ನೇ ನಿಮಿಷದಲ್ಲಿ ಆಕಾಶ್, 30 ನೇ ನಿಮಿಷದಲ್ಲಿ ಅವಿನಾಶ್, ಕೊಣನಕಟ್ಟೆ ಪರ 28 ನೇ ನಿಮಿಷದಲ್ಲಿ ಶ್ಯಾಂ, 44 ನೇ ನಿಮಿಷದಲ್ಲಿ ಯಶ್ವೀನ್ ಗೋಲು ಹೊಡೆದರು.
ಹಾತೂರು ಯೂತ್ ಕ್ಲಬ್ ಈಶ್ವರ ಯೂತ್ ಕ್ಲಬ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿತು. 22 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಸ್ಟ್ರೋಕ್‍ನ್ನು ವಿಶಾಲ್ ಗೌಡ ಗೋಲಾಗಿ ಪರಿವರ್ತಿಸಿದರು.
ಮಡಿಕೇರಿ ಚಾರ್ಮರ್ಸ್ ತಂಡ 3-1 ಗೊಲುಗಳ ಅಂತರದಿಂದ ಬೇತು ಯೂತ್ ಕ್ಲಬ್ ತಂಡದ ವಿರುದ್ಧ ಜಯಿಸಿತು. ಚಾರ್ಮರ್ಸ್ ಪರ 6 ನೇ ನಿಮಿಷದಲ್ಲಿ ಮದನ್, 29 ಮತ್ತು 38 ನೇ ನಿಮಿಷದಲ್ಲಿ ಮಣಿ 2 ಗೋಲು ಗಳಿಸಿದರು. ಬೇತು ಪರವಾಗಿ 4ನೇ ನಿಮಿಷದಲ್ಲಿ ಚೇತನ್ 1 ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
ಸುಳ್ಳಿಮಾಡ ಸುಬ್ಬಯ್ಯ ಹಾಗೂ ಅಜ್ಜಮಾಡ ಪೊನ್ನಪ್ಪ ವೀಕ್ಷಕ ವಿವರಣೆ ನೀಡಿದರು. ಪಂದ್ಯಾವಳಿ ನಿರ್ದೇಶಕರಾಗಿ ಬುಟ್ಟಿಯಂಡ ಚೆಂಗಪ್ಪ, ತೀರ್ಪುಗಾರರುಗಳಾಗಿ ನೆಲ್ಲಮಕ್ಕಡ ಪವನ್, ಚೆಂಗಪ್ಪ, ಗಣಪತಿ, ಅಪ್ಪಚ್ಚು, ಪೂವಯ್ಯ, ಕೊಕ್ಕಂಡ ರೋಶನ್, ತಾಂತ್ರಿಕ ವರ್ಗದಲ್ಲಿ ದರ್ಶನ್, ದಿಲನ್, ಹರಿಣಾಕ್ಷಿ, ಗಣಪತಿ ಹಾಗೂ ವಿನೋದ್ ಕಾರ್ಯನಿರ್ವಹಿಸಿದರು.