ಮಡಿಕೇರಿ, ಜ. 27: ನಗರ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ ಹಸಿರು ಶ್ರೇಣಿ, ಜಲಮೂಲಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಉಳಿಸಿಕೊಳ್ಳುವದರೊಂದಿಗೆ ಅಭಿವೃದ್ಧಿಪಡಿಸಲು ಸಾಧ್ಯವಿರುವ ಯೋಜನೆಗಳ ಜಾರಿಯೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವದಾಗಿ ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರ (ಮೂಡಾ)ದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಗರಸಭೆಯ ಹಿರಿಯ ಸದಸ್ಯರೂ ಆಗಿರುವ ಅಪ್ಪನೆರವಂಡ ಸಿ. ಚುಮ್ಮಿದೇವಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಶಕ್ತಿ' ಸಂದರ್ಶನದಲ್ಲಿ ನೂತನ ಅಧ್ಯಕ್ಷರು ತಮ್ಮ ಚಿಂತನೆಗಳ ಕುರಿತು ಮಾಹಿತಿಯಿತ್ತರು. 1995ರಿಂದ ಈ ತನಕ ತಾವು ಸತತವಾಗಿ ನಗರಸಭೆಯ ಸದಸ್ಯರಾಗಿದ್ದು, ನಗರದ ಬೇಕು ಬೇಡಿಕೆಗಳು, ಸಮಸ್ಯೆಗಳು ಸೇರಿದಂತೆ ಸಾಕಷ್ಟು ಅನುಭವವಿದೆ. ಮೂಡಾ ಹಾಗೂ ನಗರಸಭೆ ನಗರದ ಅಭಿವೃದ್ಧಿ - ಭವಿಷ್ಯದ ಚಿಂತನೆಯೊಂದಿಗೆ ಎರಡು ಚಕ್ರದಂತೆ ಒಂದಾಗಿ ಕೆಲಸ ನಿರ್ವಹಿಸಬೇಕಿದೆ. ಪ್ರಸ್ತುತ ತಾವು ನಗರಸಭೆಯ ಸದಸ್ಯರೂ ಆಗಿರುವದರಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಕುರಿತ

(ಮೊದಲ ಪುಟದಿಂದ) ಚಿಂತನೆಯೊಂದಿಗೆ ಕಾರ್ಯಯೋಜನೆ ಹಮ್ಮಿಕೊಳ್ಳಬೇಕಾಗಿದೆ. ಕುಡಿಯುವ ನೀರಿನ ಮೂಲ, ಆಟದ ಮೈದಾನ, ರಸ್ತೆ, ಕಟ್ಟಡ ನಿರ್ಮಾಣ ಸಂದರ್ಭ ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸಬೇಕಾಗಿದೆ. ನಿಯಮಾನುಸಾರ ಯಾವ ಕ್ರಮ ಪಾಲಿಸಬೇಕೋ ಜನತೆ ಅದನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವದಾಗಿ ಹೇಳಿದ ಚುಮ್ಮಿದೇವಯ್ಯ, ಉದ್ಯಾನವನಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವದಾಗಿ ಹೇಳಿದರು.

ಕಾಂಪ್ರಹೆನ್ಸಿವ್ ಡೆವಲಪ್‍ಮೆಂಟ್ ಪ್ಲಾನ್ (ಸಿ.ಡಿ.ಪಿ.)ನಂತೆ ಹಸಿರು ಶ್ರೇಣಿ (ಗ್ರೀನ್ ಬೆಲ್ಟ್) ಗುರುತಿಸಲ್ಪಟ್ಟಿದೆ. ಇದಕ್ಕೆ ಧಕ್ಕೆಯಾಗದಂತೆ ಯೋಜನೆಗೆ ಆದ್ಯತೆ ನೀಡಲಾಗುವದು. ಹೊಸ ಬಡಾವಣೆಗೆ ಸಂಬಂಧಿಸಿದಂತೆ ಜಾಗದ ಲಭ್ಯತೆ ನೋಡಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವದು ಎಂದ ಅವರು ಇತ್ತೀಚೆಗೆ ಹೌಸಿಂಗ್ ಫಾರ್ ಆಲ್ ಎಂಬ ಯೋಜನೆ ಬಂದಿದ್ದು, ಇದರಂತೆ ಮಾಂದಲ್‍ಪಟ್ಟಿ ರಸ್ತೆಯಲ್ಲಿ ಜಾಗ ಗುರುತು ಮಾಡಲಾಗಿದೆ. ಇಲ್ಲಿ ಸುಮಾರು 500 ಮನೆಗೆ ಅವಕಾಶವಿದ್ದು, ಫಲಾನುಭವಿಗಳ ಆಯ್ಕೆ ಮಾಡಬೇಕಿದೆ. ಹೊಸ ಬಡಾವಣೆ ನಿರ್ಮಾಣಕ್ಕೆ ಜಾಗದ ಲಭ್ಯತೆ ಕುರಿತು ಪರಿಶೀಲಿಸಬೇಕಾಗಿದೆ ಎಂದರು.

ತಮ್ಮ ಅನುಭವದಂತೆ ಕೆಲವೊಂದು ನ್ಯೂನತೆಗಳು ಇರುವದು (ಕಾನೂನು ಉಲ್ಲಂಘನೆ) ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಪ್ರಯತ್ನ ನಡೆಸಲಿರುವದಾಗಿ ಚುಮ್ಮಿದೇವಯ್ಯ ತಿಳಿಸಿದರು. ಈ ಹಿಂದಿನ ಅಧ್ಯಕ್ಷರು ಮಾಡಿರುವ ಉತ್ತಮ ಕೆಲಸ ಮುಂದುವರಿಸಲಾಗುವದು. ಇದರೊಂದಿಗೆ ಪಕ್ಷದ ನಾಯಕರು ತಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಇದಕ್ಕೆ ಚ್ಯುತಿಯಾಗದಂತೆ ಜನಪರವಾಗಿ ಕೆಲಸ ನಿರ್ವಹಿಸುವದಾಗಿ ಅವರು ಭರವಸೆ ವ್ಯಕ್ತಪಡಿಸಿದರು.