ಮಡಿಕೇರಿ, ಜು. 6: ರಾಜ್ಯದಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ (ಡಬ್ಲ್ಯೂ.ಬಿ.ಸಿ.ಐ.ಎಸ್) 2016 ಅನ್ನು ಸರ್ಕಾರದ ಆದೇಶದಂತೆ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆಯನ್ನು ಕುಶಾಲನಗರದ ಹೋಬಳಿ ಹೊರತುಪಡಿಸಿ ಉಳಿದ 15 ಹೋಬಳಿಗಳಲ್ಲಿ ಹಾಗೂ ಅಡಿಕೆ ಬೆಳೆಯನ್ನು ಮಡಿಕೇರಿ ತಾಲೂಕಿನ ಸಂಪಾಜೆ ಮತ್ತು ಭಾಗಮಂಡಲ, ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಶ್ರೀಮಂಗಲ ಮತ್ತು ಪೊನ್ನಂಪೇಟೆ ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ರೈತರ ನೋಂದಣಿಯಾಗುತ್ತಿದ್ದು, ಹೆಚ್ಚಿನ ರೈತರಿಗೆ ಯೋಜನೆಯ ಸೌಲಭ್ಯ ತಲಪಿಸುವ ಸದುದ್ದೇಶದಿಂದ ವಿಮಾ ಕಂಪೆನಿಗಳು ನಮೂದಿಸುವ ವಿಮಾ ಕಂತಿನ ದರಗಳಲ್ಲಿ ಯಾವದೇ ಬದಲಾವಣೆ ಮಾಡದೇ ಹಾಗೂ ವಿಸ್ತರಿಸಿದ ಅವಧಿಯಲ್ಲಿ ಅಂತಿಮ ದಿನಾಂಕದ ಅವಧಿಯಲ್ಲಿ ಪ್ರತಿಕೂಲ ಆಯ್ಕೆ ಮತ್ತು ನೈತಿಕ ಅಪಾಯಗಳು ಉಂಟಾಗದಂತೆ ಎಚ್ಚರ ವಹಿಸುವ ಷರತ್ತಿಗೊಳಪಟ್ಟು 2016ರ ಮುಂಗಾರು ಹಂಗಾಮಿಗೆ ತೋಟಗಾರಿಕೆ ಬೆಳೆಗಳನ್ನು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅನುಷ್ಠಾನಗೊಳಿಸಲು ಅಂತಿಮ ದಿನ ತಾ. 10 ರವರೆಗೆ ವಿಸ್ತರಿಸಲಾಗಿದೆ.

ಜಿಲ್ಲೆಯ ರೈತರು ಹತ್ತಿರದ ಬ್ಯಾಂಕುಗಳಿಗೆ ಭೇಟಿ ನೀಡಿ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಉಳಿದಂತೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಜಿಲ್ಲೆಗೆ ನಿಗದಿಯಾಗಿರುವ ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ವಿಮಾ ಕಂತನ್ನು ಕಟ್ಟಲು ತಾ. 30 ಕೊನೆ ದಿನವಾಗಿದೆ. ಯಾವದೇ ಬದಲಾವಣೆ ಇರುವದಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್ ತಿಳಿಸಿದ್ದಾರೆ.