ಸೋಮವಾರಪೇಟೆ, ಜು. 8: ಕಳೆದ ಜೂ. 19 ರಂದು ಇಲ್ಲಿನ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಮೋಹನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಕಬ್ಬಿಣದ ರಾಡ್‍ನಿಂದ ತೀವ್ರವಾಗಿ ಹಲ್ಲೆ ನಡೆಸಿ ಮೋಹನ್ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇರೆ ತಣ್ಣೀರುಹಳ್ಳ ಗ್ರಾಮದ ರಿಯಾಜ್ ಎಂಬಾತನನ್ನು ಪೊಲೀಸರು ಆತನ ಮನೆಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಯ ಸುಳಿವು ಸಂಗ್ರಹಿಸುತ್ತಿದ್ದ ಠಾಣಾಧಿಕಾರಿ ಮಹೇಶ್ ಮತ್ತು ತಂಡ, ತಣ್ಣೀರುಹಳ್ಳ ಗ್ರಾಮದ ಆತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ.

ಜನತಾ ಕಾಲೋನಿ ನಿವಾಸಿ ಮೋಹನ್ ಅವರು ಜೂ. 19 ರಂದು ರಾತ್ರಿ 9 ಗಂಟೆಯ ಸಮಯದಲ್ಲಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ಎಂ.ಡಿ. ಬ್ಲಾಕ್ ರಸ್ತೆಯಲ್ಲಿ ಹಲ್ಲೆಗೊಳಗಾಗಿದ್ದರು. 7 ಜನರ ತಂಡ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದರು ಎಂದು ಗಾಯಾಳು ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಬಷೀರ್, ಶಮ್ಮು, ಕರೀಂ ಬೇಗ್, ಅಝೀಂ ಬೇಗ್ ಅವರುಗಳನ್ನು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಜಮೀಲ್ ತಲೆಮರೆಸಿಕೊಂಡಿದ್ದು ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.