ಮಡಿಕೇರಿ, ಸೆ. 18: ಇತ್ತೀಚೆಗೆ ಕಗ್ಗೋಡ್ಲು ಗ್ರಾಮದಲ್ಲಿ ದನಗಳ ಸಾಗಾಟದ ಸಂದರ್ಭ ಇಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಆರೋಪಿ ಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಕಗ್ಗೋಡ್ಲು ಗ್ರಾಮದಲ್ಲಿ ಬಷೀರ್ ಹಾಗೂ ಸಲಾಂ ಎಂಬವರ ಮೇಲೆ ನಡೆದಿರುವ ಹಲ್ಲೆ ಅಮಾನವೀಯವಾಗಿದ್ದು, ತಕ್ಷಣ ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಗ್ರಾಮಸ್ಥ ಗಣಪತಿ ಎಂಬವರಿಂದ ರೂ. 17 ಸಾವಿರ ನೀಡಿ ಖರೀದಿಸ ಲಾಗಿದ್ದ ಎರಡು ದನ ಗಳನ್ನು ಪಿಕ್‍ಅಪ್ ವಾಹನ ದಲ್ಲಿ ಬಷೀರ್ ಹಾಗೂ ಸಲಾಂ ಕೊಂಡೊಯ್ಯು ತ್ತಿದ್ದಾಗ ಗುಂಪೊಂದು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಅಲ್ಲದೆ ಗುಂಡು ಹಾರಿಸುವ ಮೂಲಕ ದೌರ್ಜನ್ಯವನ್ನು ಮೆರೆದಿದೆ ಎಂದು ಆರೋಪಿಸಿರುವ ಕೆ.ಎ. ಯಾಕೂಬ್ ಏರ್‍ಗನ್‍ನಿಂದ ಗುಂಡು ಹಾರಿಸ ಲಾಗಿದೆ ಎಂದು ಹೇಳಲಾಗು ತ್ತಿದ್ದು, ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಿ ನೈಜಾಂಶವನ್ನು ಬಯಲಿಗೆ ಎಳೆಯ ಬೇಕೆಂದು ಒತ್ತಾಯಿಸಿದ್ದಾರೆ.

ಹಲ್ಲೆಯಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಬಷೀರ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖರೀದಿಸಿದ ದನಗಳನ್ನು ಸಾಗಿಸುವದಕ್ಕೂ ಅಡ್ಡಿಪಡಿಸುತ್ತಿರುವದಲ್ಲದೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದ್ದು, ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ವನ್ನು ತಡೆಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಆ. 14 ರಂದು ಕುಶಾಲನಗರದ ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿರುವ ಅವರು ಅಲ್ಪಸಂಖ್ಯಾತರು ಯಾವದೇ ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಯ್ದುಕೊಳ್ಳುವ ಮೂಲಕ ಕಾನೂನಿನ ಚೌಕಟ್ಟಿನಡಿ ನ್ಯಾಯ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.