ಕೂಡಿಗೆ, ಜ. 23: ಪೌರ ಕಾರ್ಮಿಕನ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರೋರ್ವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕೂಡುಮಂಗಳೂರು ಗ್ರಾ.ಪಂ. ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ಪೌರಕಾರ್ಮಿಕರ ಮುಖಂಡ ನಾಗರಾಜು ನೇತೃತ್ವದಲ್ಲಿ ಗ್ರಾ.ಪಂ. ಕಚೇರಿ ಮುಂದೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಪೌರನೌಕರರ ಮೇಲೆ ಹಲ್ಲೆ ನಡೆದಿದ್ದು, ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾ.ಪಂ.ಸದಸ್ಯ ಸುರೇಶ್ ಸ್ವಚ್ಛತಾ ಕಾರ್ಮಿಕ ಸುಬ್ರಮಣಿ ಎಂಬವರ ಮೇಲೆ ಶುಕ್ರವಾರ ಸಂಜೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕಾರ್ಮಿಕನ ಕುತ್ತಿಗೆ ಭಾಗಕ್ಕೆ ನೋವು ಉಂಟಾಗಿದೆ. ಈ ಘಟನೆಯನ್ನು ಖಂಡಿಸಿ ಸಿಬ್ಬಂದಿಗಳು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಸಣ್ಣಪ್ಪ ಹಾಗೂ ಅಭಿವೃದ್ಧಿ ಅಧಿಕಾರಿ ಆಯಿಷಾ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಸದಸ್ಯ ಕ್ಷಮೆಯಾಚನೆ ಮಾಡಬೇಕು. ಯಾವದೇ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವದಿಲ್ಲ ಎಂದು ಮುಚ್ಚಳಿಕೆ ನೀಡಬೇಕು ಹಾಗೂ ಗಾಯಾಳು ಸುಬ್ರಮಣಿಗೆ ಚಿಕಿತ್ಸೆ ವೆಚ್ಚವನ್ನು ಭರಿಸಬೇಕು ಎಂದು ಪ್ರತಿಭಟನಾಕಾರರ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಷರತ್ತು ವಿಧಿಸಿದರು.
ಎಲ್ಲ ಷರತ್ತುಗಳಿಗೆ ಸದಸ್ಯ ಒಪ್ಪಿಗೆ ಸೂಚಿಸಿ ಸಾರ್ವಜನಿಕವಾಗಿ ಕ್ಷಮೆಕೋರಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಯನ್ನು ಹಿಂಪಡೆಯಲಾಯಿತು.
ಕಾರ್ಮಿಕರ ಮೇಲೆ ಸದಸ್ಯ ಸುರೇಶ್ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಘಟನೆ ಬಗ್ಗೆ ಚರ್ಚಿಸಿ ಖಂಡಿಸಲಾಯಿತು.
ಈ ಸಂದರ್ಭ ನಾಗರಾಜು, ರಾಮಾಮ್ಮ, ಲೀಲಾ, ಗಣೇಶ್, ಶಿವಣ್ಣ, ಮಲ್ಲೇಶ್, ರಾಜೇಗೌಡ, ಜವರಪ್ಪ, ಅವಿನಾಶ್, ಪವಿತ್ರ, ಲೈಲಾ, ದುಶ್ಯಂತ್, ರಂಗ ಚುಂಚನಾಯಕ ಮತ್ತಿತರರು ಹಾಜರಿದ್ದರು.