ಕುಶಾಲನಗರ, ಮೇ 25: ಸೋಮವಾರಪೇಟೆ ತಾಲ್ಲೋಕಿನ ಬೆಟ್ಟದಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್‍ಮೆನ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮಪಂಚಾಯ್ತಿ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬೆಟ್ಟದಹಳ್ಳಿ ಗ್ರಾಮಪಂಚಾಯ್ತಿ ಯಲ್ಲಿ ವಾಟರ್‍ಮೆನ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಗಂಧರ್ವ ಎಂಬವರ ಮೇಲೆ ತಾ.22 ರಂದು ಬಿ.ಸಿ.ಪೃಥ್ವಿರಾಜ್ ಹಾಗೂ ಗೌರಮ್ಮ ದಂಪತಿಗಳು ಕುಡಿವ ನೀರು ಹರಿಸುವ ಹಾಗೂ ಪೈಪ್‍ಲೈನ್ ದುರಸ್ತಿ ಕಾರ್ಯ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ. ಬೇಸಿಗೆ ಸಂದರ್ಭ ನೀರಿನ ಅಭಾವ ತಲೆದೋರಿದ್ದು ಎಲ್ಲೆಡೆ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ಆದರೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವ ಬಗ್ಗೆ ಸಂಬಂಧಪಟ್ಟ ಗ್ರಾಮಪಂಚಾಯ್ತಿಗೆ ದೂರು ಸಲ್ಲಿಸಿ ಸಮಸ್ಯೆ ನಿವಾರಿಸಲು ಮನವಿ ಮಾಡಿಕೊಳ್ಳುವ ಅವಕಾಶವಿದ್ದರೂ ಯಾವದೇ ರೀತಿಯ ದೂರು ನೀಡದೆ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಸಿಬ್ಬಂದಿ ಗಂಧರ್ವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆ ದೂರು ನೀಡಿದ್ದರೂ ಕೂಡ ಆರೋಪಿಗಳ ಮೇಲೆ ಇದುವರೆಗೆ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಬೆಟ್ಟದಹಳ್ಳಿ ಗ್ರಾಮಪಂಚಾಯ್ತಿ ಆಡಳಿತ ಮಂಡಳಿ ಕೂಡ ಈ ಬಗ್ಗೆ ಮೌನ ವಹಿಸಿದ್ದು ಯಾವದೇ ರೀತಿಯ ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಪಂಚಾಯ್ತಿ ವತಿಯಿಂದಲೂ ಆರೋಪಿಗಳ ವಿರುದ್ಧ ದೂರು ದಾಖಲಿಸಿ ಗಂಧರ್ವ ಅವರಿಗೆ ನ್ಯಾಯ ಒದಗಿಸಿಕೊಡ ಬೇಕೆಂದು ಆಗ್ರಹಿಸಿದ ಅವರು, ತಪ್ಪಿದಲ್ಲಿ ಜಿಲ್ಲೆಯಾದ್ಯಂತ ವಾಟರ್‍ಮೆನ್‍ಗಳು ನೀರು ಸರಬರಾಜು ಸ್ಥಗಿತಗೊಳಿಸುವ ಮೂಲಕ ಹೋರಾಟ ಕೈಗೊಳ್ಳ ಲಾಗುವದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ.ಕೆ.ಮೂರ್ತಿ, ಸಹ ಕಾರ್ಯದರ್ಶಿ ಪಿ.ಉಮೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಎಸ್. ಪುನೀತ್ ಇದ್ದರು.