ಮಡಿಕೇರಿ, ಜು. 7: ಜಿಲ್ಲೆಯ ಹನಫಿ ಮುಸ್ಲಿಂ ಬಾಂಧವರು ಇಂದು ಈದುಲ್ ಫಿತರ್ (ರಂಜಾನ್) ಹಬ್ಬವನ್ನು ಶ್ರದ್ಧಾಭಕ್ತಿಯಿಂದ, ಸಂಭ್ರಮದಿಂದ ಆಚರಿಸಿದರು.ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಜರುಗಿತು. ಮುಸ್ಲಿಂ ಬಾಂಧವರು ಹಬ್ಬದ ಪ್ರಯುಕ್ತ ಪರಸ್ಪರ ಶುಭಾಶಯ ಹಂಚಿಕೊಂಡರು. ಮಡಿಕೇರಿ ನಗರದ ಜಾಮೀಯ ಮಸೀದಿ, ಮಕ್ಕಾ, ಮದೀನ ಹಾಗೂ ಲಷ್ಕರ್ ಮಸೀದಿಗಳಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆಯಿತು. ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನು ಧರಿಸಿ ಬಂಧುಗಳ ಮನೆಗಳಿಗೆ ತೆರಳಿ ಪರಸ್ಪರ ಶುಭಾಶಯ ಹಂಚಿಕೊಂಡರು.ಮಡಿಕೇರಿ: ಈದುಲ್ ಫಿತರ್ ಹಬ್ಬದ ಪ್ರಯುಕ್ತ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಅಹ್ಮದಿಯಾ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಪ್ರವಚನ ನಡೆಯಿತು. ಮಸೀದಿಯ ಧರ್ಮಗುರುಗಳಾದ ಮೊಹಮ್ಮದ್ ಮುಸ್ಲೇಹುದ್ದೀನ್ ಸಾದಿ ಅವರ ನೇತೃತ್ವದಲ್ಲಿ ನಮಾಜ್ ನಿರ್ವಹಿಸಿದ ಬಳಿಕ ಧಾರ್ಮಿಕ ಪ್ರವಚನ ನೀಡಲಾಯಿತು.ಮುಸಲ್ಮಾನ ಬಾಂಧವರು ಪರಸ್ಪರ ಆಲಿಂಗಿಸಿ ಈದ್ ಶುಭಾಶಯಗಳನ್ನು, ಹಬ್ಬದ ಸಂಭ್ರಮವನ್ನು ಹಂಚಿ ಕೊಂಡರು. ಈ ಸಂದರ್ಭ ಮಾತನಾಡಿದ ಜಮಾಅತ್ ಅಧ್ಯಕ್ಷ ಎಂ.ಯು. ವಸೀಮ್ ಅಹ್ಮದ್ ರಂಜಾನ್ ಹಬ್ಬ ಆಚರಣೆಯ ಉದ್ದೇಶ ಹಗೂ ಮಹತ್ವದ ಬಗ್ಗೆ ವಿವರಿಸಿದರು. ಜಮಾತ್‍ನ ಮಾಜಿ ಅಧ್ಯಕ್ಷ ಎಂ.ಎ. ಬಶೀರ್ ಅಹ್ಮದ್, ಪಿ.ಕೆ. ಜಲೀಲ್, ತಮೀಮ್ ಅಬ್ಬಾಸ್, ಪ್ರಮುಖರಾದ ಎಂ.ಬಿ. ನಾಸಿರ್ ಅಹ್ಮದ್, ಎಂ.ಇ. ಮಹಮ್ಮದಲಿ ಮತ್ತಿತರರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವೀರಾಜಪೇಟೆ: ಒಂದು ತಿಂಗಳಿನ ಉಪವಾಸ ವ್ರತದ ನಂತರ ಹನಫಿ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು. ಮಳೆಯ ವಾತಾವರಣವಿದ್ದುದರಿಂದ ಈದ್‍ಗಾಹ್‍ಗಳಲ್ಲಿ ಸಾಮೂಹಿಕ ನಮಾಝ್ ನಡೆಯಲಿಲ್ಲ. ಆಯಾ ಜಮಾಅತ್‍ಗಳ ಮಸೀದಿಗಳಲ್ಲೇ ನಮಾಝ್ ಮತ್ತು ಪ್ರವಚನ ನಡೆಯಿತು. ನಗರದ ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ||ಮರ್‍ಗೂಬ್ ಆಲಂ, ಸುಣ್ಣದ ಬೀದಿಯಲ್ಲಿರುವ ಮದೀನಾ ಮಸೀದಿಯಲ್ಲಿ ಮೌ||ಮುಝಮ್ಮಿಲ್, ಬಂಗಾಳಿ ಬೀದಿಯ ಮಸ್ಜಿದ್-ಎ-ಆಝಂನಲ್ಲಿ ಮೌ||ಸಿರಾಜ್ ಅಹಮದ್ ಈದ್ ಪ್ರವಚನ ನೀಡಿ ಈದ್ ನಮಾಝ್‍ಗೆ ನೇತೃತ್ವ ನೀಡಿದರು.

ನಮಾಝ್‍ನ ನಂತರ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನ ಮಾಡುವದರ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮೃತ ಹೊಂದಿದ ಹಿರಿಯರ ಸ್ಮರಣೆಗಾಗಿ ಖಬರಸ್ಥಾನದ ಸಾಮೂಹಿಕ ಸಂದರ್ಶನ ನಡೆಸಿದರು.

ಕುಶಾಲನಗರ: ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಅಂಗವಾಗಿ ಕುಶಾಲನಗರದ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಸ್ಥಳೀಯ ಜಾಮಿಯಾ ಮಸೀದಿ ಯಲ್ಲಿ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿ ಕೊಂಡರು.

ಕುಶಾಲನಗರ ಪಟ್ಟಣ ಸೇರಿದಂತೆ ಜನತಾ ಕಾಲೋನಿಯ ಮುಸಲ್ಮಾನ ಬಾಂಧವರು ಪಾಲ್ಗೊಂಡಿದ್ದರು. ದಂಡಿನಪೇಟೆ ಮಸೀದಿಯಲ್ಲಿ ಹಬ್ಬದ ಅಂಗವಾಗಿ ಪ್ರಾರ್ಥನೆ ನಡೆಯಿತು.

ಕೂಡಿಗೆ, ಬಾಳುಗೋಡು, ಕೊಪ್ಪ, ಬೈಲುಕೊಪ್ಪ ಮೊದಲಾದೆಡೆ ಮಸೀದಿಗಳಲ್ಲಿ ಗುರುವಾರ ಹಬ್ಬ ಆಚರಿಸಿದರೆ ಹಿಲಾಲ್ ಮತ್ತು ತಕ್ವ ಮಸೀದಿಗಳಲ್ಲಿ ಬುಧವಾರ ಆಚರಣೆ ನಡೆಯಿತು. ರಂಜಾನ್ ಅಂಗವಾಗಿ ಶಾಲಾ ಕಾಲೇಜುಗಳಿಗೆ ಹಾಗೂ ಸರಕಾರಿ ಕಚೇರಿಗಳಿಗೆ ಗುರುವಾರ ರಜೆ ಘೋಷಣೆಯಾಗಿದ್ದರೆ ಕೊಪ್ಪ ಭಾರತಮಾತ ಆಂಗ್ಲ ಮಾಧ್ಯಮ ಶಾಲಾ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ರಂಜಾನ್ ಅಂಗವಾಗಿ ಎರಡು ದಿನಗಳ ರಜಾದ ಮಜಾ ಅನುಭವಿಸುವಂತಾಯಿತು.

ಶನಿವಾರಸಂತೆ : ಪಟ್ಟಣದ ಹನಫಿ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಸಂಭ್ರಮ ದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಬೆಳಿಗ್ಗೆ ಜಾಮಿಯ ಮಸೀದಿ ಹಾಗೂ ಗುಂಡೂರಾವ್ ಬಡಾವಣೆಯ ಮಸೀದಿಗಳಲ್ಲಿ ನಡೆದ ವಿಶೇಷ ನಮಾಜ್‍ನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು.

ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಜಾಮೀಯ ಮಸೀದಿಯ ಧರ್ಮಗುರು ಅಕೀಬ್ ಅನ್ವರ್ ಈದ್ ಪ್ರವಚನ ನೀಡಿದರು. ನೂತನ ವಸ್ತ್ರ ಧರಿಸಿದ ಮುಸ್ಲಿಂ ಸಮುದಾಯದವರು ಪ್ರವಚನ ಆಲಿಸಿದರು. ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಾರ್ಥನೆಯ ಬಳಿಕ ಬಂಧು ಬಳಗದವರನ್ನು ಮನೆಗೆ ಆಹ್ವಾನಿಸಿ ವಿಶೇಷ ಭೋಜನ ಸವಿದು ಸಂಭ್ರಮಿಸಿದರು.