ಸೋಮವಾರಪೇಟೆ, ಆ. 17: ಕುಶಾಲನಗರದಲ್ಲಿ ತಾ. 14ರ ರಾತ್ರಿ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಿರುವ ಇಲ್ಲಿನ ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿತು.

ಇತ್ತೀಚೆಗೆ ಆಟೋ ಚಾಲಕರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದು, ರಾತ್ರಿ ವೇಳೆ ಕೆಲಸ ನಿರ್ವಹಿಸಲು ಕಷ್ಟವಾಗಿದೆ. ಆಟೋ ಚಾಲಕರು ಹೆಚ್ಚಿನವರು ಬಡವರಾಗಿದ್ದು, ಇದನ್ನೇ ನಂಬಿ ಹಲವು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ರಾತ್ರಿ ಆಟೋ ಚಾಲನೆ ಮಾಡುವವರಿಗೆ ಯಾವದೇ ಭದ್ರತೆ ಇಲ್ಲ ಎಂದು ಸಂಘದ ಅಧ್ಯಕ್ಷ ಆರ್. ಮೋಹನ್ ಆರೋಪಿಸಿದರು. ಪಟ್ಟಣದ ಕೆಲವು ವೃತ್ತಗಳಲ್ಲಿ ಸಿ.ಸಿ. ಟಿವಿ, ಸೋಲಾರ್ ದೀಪಗಳನ್ನು ಅಳವಡಿಸುವಂತೆ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ಸಿಸಿ ಟಿವಿ ಅಳವಡಿಸಿದಲ್ಲಿ ಹೆಚ್ಚಿನ ಅನುಕೂಲವಾಗಲಿದ್ದು, ಸಂಬಂಧಿಸಿದವರು ಕ್ರಮ ತೆಗೆದು ಕೊಳ್ಳುವಂತೆ ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ಎಚ್.ಕೆ. ಗಂಗಾಧರ್ ಮಾತನಾಡಿ, ರಾತ್ರಿ ಆಟೋ ಚಾಲನೆ ಮಾಡುವ ಆಟೋ ಚಾಲಕರು ಅಭದ್ರತೆಯಿಂದ ಸಾಗಬೇಕಿದೆ. ಮುಂದೆ ಈ ರೀತಿಯ ಘಟನೆಗೆ ಜಿಲ್ಲಾಡಳಿತ ಅವಕಾಶ ನೀಡದೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು. ಮೃತ ಆಟೋ ಚಾಲಕ ಪ್ರವೀಣ್ ಪೂಜಾರಿ ಕುಂಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದರು. ಇಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಆಟೋ ನಿಲ್ಲಿಸಿ ಸಾಂಕೇತಿಕವಾಗಿ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ ಒಂದೆರಡು ದಿನಗಳ ಒಳಗೆ ಅಪರಾಧಿಗಳನ್ನು ಬಂಧಿಸದಿದ್ದಲ್ಲಿ ಜಿಲ್ಲಾ ಸಂಘಟನೆಯೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಿ.ಸಿ. ಶಿವಪ್ಪ ಮಾತನಾಡಿ, ಈಗಾಗಲೇ ಜಿಲ್ಲಾಡಳಿತ ಅಪರಾಧಿಗಳನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಿದೆ. ಅಪರಾಧಿಗಳು ಎಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಬಂಧಿಸಲಾಗುವದು ಎಂದು ಹೇಳಿದರು. ಮನವಿ ಸಲ್ಲಿಸುವ ಮುನ್ನ ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಸಂಘದ ಸದಸ್ಯರು ಮಾನವ ಸರಪಳಿ ರಚಿಸಿ, ನಂತರ ಮೆರವಣಿಗೆಯ ಮೂಲಕ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಸಿ.ಡಿ. ನೆಹರು, ಉಪಾಧ್ಯಕ್ಷ ಮಂಜು, ಖಜಾಂಚಿ ಎಂ.ಎಸ್. ಮಹಮದ್ ಶಫಿ, ಸಹ ಕಾರ್ಯದರ್ಶಿ ಬಿ.ಜಿ. ರವಿ, ಗಣೇಶ, ರವೀಶ್, ಅವಿಲಾಶ್ ಮತ್ತಿತರರು ಪಾಲ್ಗೊಂಡಿದ್ದರು.