ಕುಶಾಲನಗರ, ಜೂ. 27: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳಾಗಿ ರೂಪಿಸಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಹಣ ಮಾಡುವ ದಂಧೆಗೆ ಇಳಿದಿರುವದು ದುರಂತದ ಸಂಗತಿಯಾಗಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಗೃಹ ಮಂಡಳಿ ಬಡಾವಣೆಯಲ್ಲಿ ಮಾರುತಿ ವಿದ್ಯಾಸಂಸ್ಥೆ ವತಿಯಿಂದ ರೂ.45 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ಸಂದರ್ಭ ಮಹಾನಗರಗಳಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ರೂ 5 ರಿಂದ 10 ಲಕ್ಷ ನೀಡಿ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವಂತ ದುಸ್ಥಿತಿ ಬಂದಿದೆ.

ವಿದ್ಯಾದಾನ ಮಾಡಬೇಕಾದ ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕಾಯಕದಲ್ಲಿ ತೊಡಗಿವೆ ಎಂದು ರಂಜನ್ ದೂರಿದರು. 31 ವರ್ಷಗಳ ಹಿಂದೆ ಮಾರುತಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಡಳಿತ ಮಂಡಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ರಂಜನ್ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ 3 ಲಕ್ಷ ಅನುದಾನ ಒದಗಿಸಿಕೊಡುವದಾಗಿ ಭರವಸೆ ನೀಡಿದರು.

ಉತ್ತಮ ಫಲಿತಾಂಶಗಳನ್ನು ತರುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಲು ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ ಮಾತನಾಡಿ, ಶಿಕ್ಷಕರು ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಸಂಸ್ಥೆ ನಿರ್ದೇಶಕ ಜಿ.ಎಲ್.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಜೆ.ಪಾಂಡುರಂಗ ಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಎಂ.ವಿ.ನಾರಾಯಣ ಶಾಲಾ ವರದಿ ವಾಚಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಮಾರುತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಸ್.ಎಲ್.ಶ್ರೀಪತಿ, ಕೋಶಾಧ್ಯಕ್ಷ ವಿ.ಡಿ.ಪುಂಡರೀಕಾಕ್ಷ, ನಿರ್ದೇಶಕರಾದ ಬಿ.ಆರ್. ನಾಗೇಂದ್ರಪ್ರಸಾದ್, ಎಸ್.ಎಸ್. ಮಹೇಶ್, ಎ.ಎಂ. ನಂಜಪ್ಪ, ಬಿ.ಎಲ್. ಅಶೋಕ್ ಕುಮಾರ್, ಕೆ.ಟಿ. ಸುಬ್ಬಯ್ಯ, ಟಿ. ಶ್ರೀನಿವಾಸ್ ಹತ್ವಾರ್, ಸಿ.ಪಿ. ಜೆಮ್ಸಿಪೊನ್ನಪ್ಪ, ಬಿ.ಆರ್. ರಾಜೀವ್, ಕೆ.ಎ. ಬೊಳ್ಳಮ್ಮ, ಪಿ.ಜಿ. ಗಂಗಾಧರ್, ಎಂ.ಆರ್. ಸೋಮಯ್ಯ, ಮುಖ್ಯ ಶಿಕ್ಷಕಿ ಚಂದ್ರಕಲಾ ಉಪಸ್ಥಿತರಿದ್ದರು.

ಶಿಕ್ಷಕ ಸತೀಶ್ ನಿರೂಪಿಸಿದರು. ಬೆಳ್ಳಿಯಪ್ಪ ವಂದಿಸಿದರು. ಸಿಂಚನ ತಂಡದವರು ಪ್ರಾರ್ಥಿಸಿದರು. ಇದೇ ಸಂದರ್ಭ ಕಬಡ್ಡಿ ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದ ಶಾಲಾ ವಿದ್ಯಾರ್ಥಿನಿ ಯಮುನಾ ಸೇರಿದಂತೆ ದಾನಿಗಳಾದ ಉಮಾಶಂಕರ್, ಎ.ಎಂ. ನಂಜಪ್ಪ, ಅರುಣ್, ರೇಖಾ ರಘುಭಟ್ ಅವರನ್ನು ಸನ್ಮಾನಿಸಲಾಯಿತು.