ಸುಂಟಿಕೊಪ್ಪ, ನ. 13: 500 ಹಾಗೂ 1000 ರೂ.ಮುಖ ಬೆಲೆಯ ಹಳೆಯ ನೋಟನ್ನು ಬದಲಾಯಿಸಲು ಬ್ಯಾಂಕ್ ಹಾಗೂ ಅಂಚೆ ಕಚೇರಿ ಮುಂದೆ ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪ ದಲ್ಲಿ ಸರತಿ ಸಾಲಿನಲ್ಲಿ ಜನರು ಮುಗಿಬಿದ್ದ ದೃಶ್ಯ ಕಂಡು ಬಂತು.ಭಾನುವಾರ ದಿನವೂ ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕ್ ಅಂಚೆ ಕಚೇರಿ ತೆರೆದಿದ್ದರಿಂದ ಮಧ್ಯಮ ವರ್ಗದವರು ಬಡ ಕೂಲಿ ಕಾರ್ಮಿಕರು ಹಳೆಯ 500 ಹಾಗೂ 1000 ರೂ. ನೋಟುಗಳನ್ನು ಬದಲಿಸಲು ಹರಸಾಹಸ ಪಡುತ್ತಿದ್ದರು.

ಅಂಚೆ ಕಚೇರಿಗೆ ಸಾಕಷ್ಟು ಮಂದಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆರ್‍ಬಿಐ ಸಂಸ್ಥೆಯು ಅಂಚೆ ಕಚೇರಿಯಲ್ಲ್ಲಿಯೂ 500 ಹಾಗೂ 1000 ರೂ. ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವನ್ನು ಒದಗಿಸಿರುವ ಬಗ್ಗೆ ಮಾಹಿತಿಯನ್ನು ಮಾಧ್ಯಮಗಳಲ್ಲಿ ನೀಡಿದೆ. ಅದರೆ ಅಂಚೆ ಕಚೇರಿಗೆ ಬೇಡಿಕೆಯ ಹಣವನ್ನು ಪೂರೈಸದೆ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ರಾಷ್ಟ್ರೀಕೃತ ಬ್ಯಾಂಕ್‍ಗಳ ಮೊರೆಹೋಗಿ ಅಂಗಲಾಚಿ ತಂದರೂ ಅಂಚೆ ಕಚೇರಿಗೆ ಬರುವ ಜನತೆಗೆ ನೀಡಲು ಸಾಧ್ಯವಾಗುತ್ತಿಲ್ಲ. ಹಣ ಎಲ್ಲೆಲ್ಲಿಗೂ ಸಾಕಾಗದಾಗಿದ್ದು, ಸಾರ್ವಜನಿಕರ ಕೆಂಗಣ್ಣು ಹಾಗೂ ನಿಂದನೆಗೂ ಈಡಾಗುವಂತಾಗಿದೆ.

ಅಂಚೆ ಕಚೇರಿಗೂ ಸಾಕಷ್ಟು ಹಣ ಬಾರದೆ ಇರುವದರಿಂದ ಗ್ರಾಹಕರಿಗೆ ನೋಟನ್ನು ಬದಲಿಸಿಕೊಡಲು ಅಂಚೆ ಕಚೇರಿಯ ಅಧಿಕಾರಿಗಳು ಪ್ರಯಾಸ ಪಡುವಂತಾಗಿದೆ. ಆನೇಕರು ಚಿಲ್ಲರೆ ಸಿಗದೆ ಸಪ್ಪೆ ಮೋರೆ ಹಾಕಿಕೊಂಡು ವಾಪಾಸ್ಸು ತೆರಳಿದ್ದಾರೆ. ಬ್ಯಾಂಕುಗಳಲ್ಲೂ ಸಾಕಷ್ಟು ಕರೆನ್ಸಿ ಬಾರದೆ ಇರುವದರಿಂದ ‘ನಾಳೆ’ ಬನ್ನಿ ಎಂಬ ಉತ್ತರದಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಯಿತು.

ಎಟಿಎಂ ಕೇಂದ್ರದಲ್ಲಿ ನಗಧೀಕರಿಸಲು ಆಗದೆ ಗ್ರಾಹಕರು ಮಾನಸಿಕ ಕಿರಿಕಿರಿ ಅನುಭವಿಸು ವಂತಾಯಿತು. ಜೌಷಧಿ ಅಂಗಡಿ, ಪ್ರೆಟ್ರೋಲ್ ಬಂಕ್, ಹಾಲಿನ ಅಂಗಡಿಗಳಲ್ಲೂ ಹಳೆಯ 500 ಮತ್ತು 1000 ರೂ. ನೋಟಿಗೆ ಚಿಲ್ಲರೆ ಇಲ್ಲದೆ ಸಂತೆ ದಿನವಾದ ಭಾನುವಾರ ಗ್ರಾಹಕರು ಪರದಾಡುವಂತಾಯಿತು.