ಮಡಿಕೇರಿ, ಆ.31 : ಚೆಟ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ಒದಗಿಸಲು ಮುಂದಿನ ಒಂದು ತಿಂಗಳ ಕಾಲಾವಧಿಯ ಒಳಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯ್ತಿ ಮುಂಭಾಗ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವದಾಗಿ ಸಿಪಿಐಎಂನ ಚೆಟ್ಟಳ್ಳಿ ಶಾಖೆಯ ಕಾರ್ಯದರ್ಶಿ ಎನ್. ಮಹೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‍ನ 8 ಮಂದಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆಯೆ ಒಮ್ಮತಾಭಿಪ್ರಾಯವಿಲ್ಲದೆ ಆಡಳಿತ ಹದಗೆಟ್ಟಿದೆ. ಆಡಳಿತ ಪಕ್ಷದ ಸದಸ್ಯರು ವಿಪಕ್ಷ ಬಿಜೆಪಿಯ 7 ಮಂದಿ ಸದಸ್ಯರೊಂದಿಗೆ ಸೇರಿ ನಡೆಸುತ್ತಿರುವ ರಾಜಕೀಯಗಳಿಂದ ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ ಎಂದು ಆರೋಪಿಸಿದರು. ಯಾವದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿಗಳಿಗೆ ಗ್ರಾಮ ಪಂಚಾಯ್ತಿಯನ್ನು ವೇದಿಕೆಯನ್ನಾಗಿ ಮಾಡಿಕೊಳ್ಳ ಬಾರದು ಎಂದರು.

ಮಂಜೂರಾದ ಜಾಗಕ್ಕೆ ಹಕ್ಕುಪತ್ರ ಸಿಗದೇ ಇರುವದರಿಂದ ಇಲ್ಲಿ ನಿವೇಶನ ದೊರಕಿದ ಬಹಳಷ್ಟು ಕುಟುಂಬಗಳು ಲೈನ್ ಮನೆಗಳಲ್ಲೇ ನೆಲೆಸಿರುವದಾಗಿ ವಿಷಾದ ವ್ಯಕ್ತಪಡಿಸಿದರು.

ಸುತ್ತಮುತ್ತಲ ಗ್ರಾಮಗಳ ಕೇಂದ್ರ ಸ್ಥಾನವಾಗಿರುವ ಚೆಟ್ಟಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವೊಂದನ್ನು ನಿರ್ಮಿಸಲು ಗ್ರಾಪಂ ಆಡಳಿತಕ್ಕೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಸಂಪೂರ್ಣ ಹದಗೆಟ್ಟಿರುವ ಕೂಡ್ಲೂರು ಚೆಟ್ಟಳ್ಳಿ ರಸ್ತೆಯ ಡಾಂಬರೀಕರಣಕ್ಕೂ ಅಗತ್ಯ ಕ್ರಮ ಕೈಗೊಳ್ಳದಿರುವದರಿಂದ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಗ್ಗೂಡಿ ಉದ್ದೇಶಪೂರ್ವಕವಾಗಿ ಗೈರು ಹಾಜರಾಗುವ ಮೂಲಕ ಗ್ರಾಪಂ ಸಭೆಗಳು ನಡೆಯದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಪಿಐಎಂ ಚೆಟ್ಟಳ್ಳಿ ಗ್ರಾಮ ಸಮಿತಿ ಸದಸ್ಯ ವೈ.ಕೆ. ಗಣೇಶ್ ಮಾತನಾಡಿ, ಬ್ಯಾರಂಗಿಬೆಟ್ಟದಲ್ಲಿ ಅಂದಾಜು 300 ಮಂದಿ ಬಡವರಿಗೆ ಹಲವಾರು ವರ್ಷಗಳ ಹಿಂದೆ ನಿವೇಶನ ಒದಗಿಸಿದ್ದರೂ ಅಲ್ಲಿ ನೆಲೆಸುವದಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಟೀಕಿಸಿದರು. ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂದಾಜು 60 ಏಕರೆ ಪೈಸಾರಿ ಜಾಗವಿದ್ದು, ಅದನ್ನು ಪಂಚಾಯ್ತಿಯ ಬಡವರ್ಗದ ಮಂದಿಗೆ ನೀಡಬೇಕೆಂದು ಒತ್ತಾಯಿಸಿದರು.