ಸೋಮವಾರಪೇಟೆ, ಜು. 25: ತಲತಲಾಂತರಗಳಿಂದ ಅರಣ್ಯ ಸೇರಿದಂತೆ ಅರಣ್ಯದಂಚಿನಲ್ಲಿ ಹಾಡಿಗಳನ್ನು ಮಾಡಿಕೊಂಡು ಜೀವನ ನಡೆಸ್ತಿದ್ದೇವೆ. ಈಗ ಸರ್ಕಾರ ನಮಗೆ ಹಕ್ಕುಪತ್ರ ನೀಡಲು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮುಂದಾಗಿದ್ದು, ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ. ನಮ್ಮ ಮೇಲೆಯೇ ಕೇಸ್ ಹಾಕೋದಾಗಿ ಅರಣ್ಯಾಧಿಕಾರಿ ಬೆದರಿಸ್ತಿದ್ದಾರೆ. ನಾವೆಲ್ಲಾ ಆತ್ಮಹತ್ಯೆ ಮಾಡ್ಕೋಬೇಕಾ? ಹೀಗೆಂದು ತಾಲೂಕಿನ ವಿವಿಧ ಹಾಡಿವಾಸಿಗಳು ತಮ್ಮ ಅಳಲು ತೋಡಿಕೊಂಡರು.ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಯಡವನಾಡು, ವಳಗುಂದ, ಸೂಳೆಬಾವಿ ಸೇರಿದಂತೆ ವಿವಿಧ ಹಾಡಿಗಳ ನಿವಾಸಿಗಳು ಭಾಗವಹಿಸಿ ಪ್ರಶ್ನಿಸಿದರು. ಯಡವನಾಡಿನ ಹಾಡಿಯನ್ನು ಸರ್ವೆ ಮಾಡಿದ್ದು, ಎರಡು ತಿಂಗಳು ಕಳೆದರೂ ಇನ್ನೂ ವರದಿ ನೀಡಿಲ್ಲ. ಇಲ್ಲಿನ ವಲಯಾರಣ್ಯಾಧಿಕಾರಿ ಯವರಿಗೆ ನಾವುಗಳು ವಾಸವಿರುವ ಜಾಗವನ್ನು ತೋರಿಸಿದ್ದೇವೆ. ನಮ್ಮ ಕುಟುಂಬಗಳಲ್ಲಿ ನಿಧನ ಹೊಂದಿದವರ ಅಂತ್ಯಸಂಸ್ಕಾರ ಮಾಡಿದ ಸ್ಥಳಗಳನ್ನೂ ತೋರಿಸಿದರೆ, ‘ಅದು ನೀವು ಚಳಿ ಕಾಯಿಸಿರುವದು. ಇದಕ್ಕಾಗಿ ನಿಮ್ಮ ಮೇಲೆಯೇ ಕೇಸು ಹಾಕುತ್ತೇನೆ’ ಎಂದು ಹೆದರಿಸುತ್ತಿದ್ದಾರೆ. ಹೀಗೆಲ್ಲಾ ನಮ್ಮನ್ನು ಹೆದರಿಸಿ, ಕಿರುಕುಳ ಕೊಟ್ಟರೆ ನಾವುಗಳು ಬದುಕೋದಾದ್ರೂ ಹೇಗೆ? ಎಲ್ಲರೂ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆಯಷ್ಟೇ ಎಂದು ಸಭೆಯಲ್ಲಿ ಹೇಳಿದರು.

ಇನ್ನು ತಾಲೂಕಿನ ವಳಗುಂದ ಹಾಡಿಯ ಸರ್ವೇ ಕಾರ್ಯ ಮುಗಿದು ಮೂರು ವರ್ಷಗಳಾಗುತ್ತಾ ಬಂದರೂ, ಆ ಬಗ್ಗೆ ದಾಖಲಾತಿಗಳನ್ನು ನಮಗೆ ನೀಡಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ಕೇಳಿದರೆ ಕಾಲಾವಕಾಶ ನೀಡುತ್ತಾ ಬರುತ್ತಿದ್ದಾರೆ. ಇದಕ್ಕಾಗಿ ಪ್ರತಿ ಶುಕ್ರವಾರ ಮಡಿಕೇರಿಗೂ ಹೋಗಿ ಬರುವದೇ ಕೆಲಸವಾಗಿದೆ. ಸುಮ್ಮನೆ ಹಣ ವ್ಯಯವಾಗುತ್ತಿದೆ ವಿನ: ದಾಖಲಾತಿ ದೊರಕುತ್ತಿಲ್ಲ. ಶಿಥಿಲಗೊಂಡಿರುವ ನಮ್ಮ ಗುಡಿಸಲುಗಳ ಒಳಗೆ ನೀರು ನಿಂತು ಜೀವನ ನಡೆಸುವದೇ ಕಷ್ಟವಾಗಿದೆ ಎಂದು ಗ್ರಾ.ಪಂ. ಮಾಜೀ ಸದಸ್ಯೆ ಸೋಮಕ್ಕ ಸೇರಿದಂತೆ ಹತ್ತಾರು ಮಂದಿ ಗಿರಿಜನ ಮುಖಂಡರು ದೂರಿದರು.

ಈ ಸಂದರ್ಭ ಶಾಸಕರು ಮಾತನಾಡಿ, ತಾಲೂಕಿನ ಹಾಡಿಗಳ ಜನತೆಯ ಸಮಸ್ಯೆಗಳು ಬಂದಾಗ ತುರ್ತು ನಿಗಾ ವಹಿಸಿ ಪರಿಹಾರಕ್ಕೆ ಮುಂದಾಗಬೇಕೆಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು. ಮುಂದಿನ ಒಂದು ತಿಂಗಳೊಳಗಾಗಿ ಈಗ ಇರುವ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ನಾನೇ ಸ್ಥಳಕ್ಕೆ ಬಂದು ಪರಿಹರಿಸುವೆ ಎಂದು ಭರವಸೆ ನೀಡಿದರು. ತಾಲೂಕಿನಲ್ಲಿ ಈಗಾಗಲೇ ಶೇ. 94 ರಷ್ಟು ಪಡಿತರ ಚೀಟಿ ಸೇರ್ಪಡೆ ಕಾರ್ಯ ಮುಗಿದಿದ್ದರೂ, ಅದರಲ್ಲಿ ಹಲವು ಕುಟುಂಬಗಳು ನೋಂದಾಯಿತ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ನೀಡದ ಹಿನ್ನೆಲೆಯಲ್ಲಿ ಅವುಗಳನ್ನು ಅಮಾನತ್ತಿನಲ್ಲಿಡಲಾಗಿದೆ. ಅಧಾರ್ ಸಂಖ್ಯೆ ನೀಡಿದರೆ ಮಾತ್ರ ಚಾಲ್ತಿಗೆ ಬಂದು ಪಡಿತರ ಸಿಗಲಿದೆ ಎಂದು ಮಾಹಿತಿ ನೀಡಿದರು.

ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಹಂಚಿನಳ್ಳಿಯಲ್ಲಿ ರು. 5ಕೋಟಿ ವೆಚ್ಚದಲ್ಲಿ ನೂತನ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ತೀರಾ ಕಿರಿದಾಗಿದ್ದ ಸೇತುವೆಯನ್ನು ಅಗಲ ಮಾಡದೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಮಾಡಿದ್ದರಿಂದ ಒಂದು ವಾಹನ ಸಂಚರಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಮನವಿಯ ಮೇರೆಗೆ, ನೂತನ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿ, ಅಗಲೀಕರಣ ಮಾಡಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗೆ ಸೂಚಿಸಿದರು.ಇಲ್ಲಿನ ಚನ್ನಬಸಪ್ಪ ಸಭಾಂಗಣದ ಕಟ್ಟಡ ತೀರಾ ಶಿಥಿಲಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ. ಅದರ ದುರಸ್ತಿಗಾಗಿ ಅನುದಾನ ಒದಗಿಸಬೇಕೆಂದು ಶಾಲಾ ಮುಖ್ಯೋಪಾಧ್ಯಾಯ ರಮೇಶ್, ಶಿಕ್ಷಕರುಗಳಾದ ಎನ್.ಎಂ. ನಾಗೇಶ್, ಮಾನೆರಾಜುರವರುಗಳು ಮನವಿ ಸಲ್ಲಿಸಿದರು. ಸೂರ್ಲಬ್ಬಿ ಸರಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 22 ವಿದ್ಯಾರ್ಥಿಗಳಿದ್ದು ಒಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಪ್ರೌಢಶಾಲೆಗೆ ಮೂವರು ಶಿಕ್ಷಕರಿದ್ದು, ಇಂಗ್ಲಿಷ್ ಹಾಗೂ ಸಮಾಜ ಪಾಠ ಮಾಡಲು ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಗರ್ವಾಲೆ ಗ್ರಾ.ಪಂ. ಉಪಾಧ್ಯಕ್ಷ ಪಳಂಗಪ್ಪ ಹಾಗೂ ಎಸ್‍ಡಿಎಂಸಿ ಅಧ್ಯಕ್ಷ ಕೆ.ಜೆ. ಕುಟ್ಟಪ್ಪ ಮನವಿ ಸಲ್ಲಿಸಿದರು. ಸಮಸ್ಯೆ ಪರಿಹರಿಸಲು ಜುಲೈ 28ರಂದು ಶಾಲೆಗೆ ಭೇಟಿ ನೀಡಿ ಪರಿಹಾರಕ್ಕೆ ಮುಂದಾಗುವದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಭರವಸೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಉಪವಿಭಾಗಾಧಿಕಾರಿ ನಂಜುಂಡೇ ಗೌಡ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಹಾಗೂ ಜನಪ್ರತಿನಿಧಿ ಗಳು ಅಧಿಕಾರಿಗಳಿಗೆ ಕ್ರಮದ ಬಗ್ಗೆ ಸೂಚನೆ ನೀಡುವ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನ ಇದಾಗಿದ್ದು, ಇದರ ಸದುಪಯೋಗ ವನ್ನು ಸಾರ್ವಜನಿಕರು ಪಡೆದುಕೊಳ್ಳು ವಂತಾಗಬೇಕೆಂದರು.

ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಸದಸ್ಯೆ ತಂಗಮ್ಮ, ಚೌಡ್ಲು ಗ್ರಾಪಂ ಅಧ್ಯಕ್ಷೆ ವನಜ, ತಹಶೀಲ್ದಾರ್ ಬಿ.ಸಿ. ಶಿವಪ್ಪ, ಪೊಲೀಸ್ ಉಪಅಧೀಕ್ಷಕ ಟಿ. ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಇದ್ದರು.