ಕುಶಾಲನಗರ, ಆ. 19: ಇತ್ತೀಚೆಗೆ ಹತ್ಯೆಯಾದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಪ್ರವೀಣ್ ಪೂಜಾರಿ ಹಂತಕರನ್ನು ಬಂಧಿಸುವದರೊಂದಿಗೆ ಅವರ ಕುಟುಂಬಕ್ಕೆ ಸರಕಾರ ತಕ್ಷಣ ಪರಿಹಾರ ಒದಗಿಸಬೇಕೆಂದು ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಡಿ.ಕೆ.ಚಂದ್ರಶೇಖರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ದೇವರಾಜ್, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರ ಹತ್ಯೆ ನಿರಂತರವಾಗಿ ನಡೆಯುತ್ತಿರುವದು ದುರಂತದ ವಿಚಾರವಾಗಿದೆ. ಸಣ್ಣ ಪುಟ್ಟ ಕಾರಣಗಳಿಗೂ ಹಿಂದೂಪರ ಸಂಘಟನೆಗಳ ಪ್ರಮುಖರನ್ನು ಗುರಿಯಾಗಿಸಿ ಧಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಗುಡ್ಡೆಹೊಸೂರಿನಲ್ಲಿ ನಡೆದ ಪ್ರವೀಣ್ ಪೂಜಾರಿ ಹತ್ಯೆ ಮಾಡಿದ ಹಂತಕರನ್ನು ಪೊಲೀಸರಿಂದ ಇದುವರೆಗೆ ಬಂಧಿಸಲಾಗಿಲ್ಲ. ಹತ್ಯೆ ನಡೆದು ವಾರ ಕಳೆಯುತ್ತಾ ಬಂದರೂ ಆರೋಪಿಗಳ ಪತ್ತೆ ಬಗ್ಗೆ ಪೊಲೀಸರಿಗೆ ಯಾವದೇ ರೀತಿಯ ಸುಳಿವು ದೊರಕದಿರುವದು ವಿಪರ್ಯಾಸ ಎಂದರು. ಮೃತನ ಕುಟುಂಬಕ್ಕೆ ಸರಕಾರದಿಂದ ತಕ್ಷಣ ಅಗತ್ಯ ಪರಿಹಾರ ಒದಗಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸುವದರೊಂದಿಗೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕುಶಾಲನಗರ ಬಂದ್‍ಗೆ ಕರೆ ನೀಡಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ನಗರ ಬಿಜೆಪಿ ಘಟಕದ ಕಾರ್ಯದರ್ಶಿ ಹೆಚ್.ಡಿ.ಶಿವಾಜಿ ಇದ್ದರು.