ಮಡಿಕೇರಿ, ಜ.12: ಸ್ವಾಮಿ ವಿವೇಕಾನಂದರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಮಹಾನ್ ತತ್ವಜ್ಞಾನಿ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪದವಿ ಪೂರ್ವ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದ ‘ಸ್ವಾಮಿ ವಿವೇಕಾನಂದರ’ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಮಹಾನ್ ದಾರ್ಶನಿಕ, ದೇಶಭಕ್ತಿ ಉಳ್ಳವರಾಗಿದ್ದರು. ಇವರ ಆದರ್ಶ ಬದುಕಿನ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು.

ಯುವ ಜನತೆ ದೇಶದ ಭವಿಷ್ಯ ನಿರ್ಮಾಪಕರು, ಯುವ ಜನರಲ್ಲಿನ ಸುಪ್ತ ಪ್ರತಿಭೆ ಹಾಗೂ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಆ ದಿಸೆಯಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಕನಸಿನ ಭಾರತ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರವನ್ನು ಅತ್ಯಂತ ಪ್ರಭಾವಯುತವಾಗಿ ಬಿಂಭಿಸಿದರು. ಯುವ ಜನತೆಗೆ ಸ್ವಾಮಿ ವಿವೇಕಾನಂದರೇ ಬಹುದೊಡ್ಡ ಸ್ಫೂರ್ತಿ ಹಾಗೂ ಆದರ್ಶ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ವಿಶ್ವಕಂಡ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರು ಯುವ ಜನರಿಗೆ ಪ್ರೇರಕರಾಗಿದ್ದರು. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಗುಣಗಳು ಮಾದರಿ. ಆ ದಿಸೆಯಲ್ಲಿ ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ರಾಷ್ಟ್ರಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಮೈಸೂರು ರಾಮಕೃಷ್ಣಾಶ್ರಮದ ಉಪನ್ಯಾಸಕ ಎಸ್.ಎಸ್.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ನಕರಾತ್ಮಕ ಚಿಂತನೆ ಬಿಟ್ಟು ಸಕರಾತ್ಮಕವಾಗಿ ಯೋಚನೆ ಮಾಡಬೇಕು. ಕೀಳರಿಮೆ ಹಾಗೂ ಹಿಂಜರಿಕೆಯಿಂದ ಹೊರಬರಬೇಕು. ತಮ್ಮತನವನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಹೊರತಂದಿರುವ ಕಿರು ಹೊತ್ತಿಗೆಯನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಬಿಡುಗಡೆ ಮಾಡಿದರು.

ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ.ಸ್ವಾಮಿ, ಸಂತ ಜೋಸೆಫರ ಶಾಲೆಯ ಮುಖ್ಯಸ್ಥೆ ಮರಿಯ ಗೋರಟ್ಟಿ, ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶೋಭ, ಪೌರಾಯುಕ್ತೆ ಬಿ.ಶುಭ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚೈತ್ರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಲ್.ಎನ್.ಕುಳ್ಳಯ್ಯ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಪ್ರವೀಣ್ ಕುಮಾರ್ ಹಾಗೂ ಇತರರು ಇದ್ದರು.

ಉಪನ್ಯಾಸಕ ಹೇಮಂತ್ ಕುಮಾರ್ ಸ್ವಾಗತಿಸಿದರು. ಹರ್ಷಿತಾ ತಂಡದವರು ಪ್ರಾರ್ಥಿಸಿ, ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು.