ಮಡಿಕೇರಿ, ಜು. 30: ಜಿಲ್ಲಾಡಳಿತ ವತಿಯಿಂದ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಂಘ -ಸಂಸ್ಥೆಗಳು ಕೈಜೋಡಿಸಿ ಸ್ವಾತಂತ್ರ್ಯ ದಿನಾಚರಣೆ ಯಶಸ್ವಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿಯು ಸಹ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಹಾಗೆಯೇ ಎಲ್ಲರೂ ತೊಡಗಿಸಿ ಕೊಂಡು ಸ್ವಾತಂತ್ರ್ಯ ದಿನಾಚರಣೆ ಯನ್ನು ಅಚ್ಚುಕಟ್ಟಾಗಿ ಆಚರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸ್ವಾತಂತ್ರ್ಯ ದಿನಾಚರಣೆ ಇಡೀ ದೇಶದ ಎಲ್ಲರ ಸಂಭ್ರಮ ಆಚರಣೆಯಾಗಿದ್ದು, ಸ್ವಯಂ ಪ್ರೇರಣೆಯಿಂದ ಎಲ್ಲರೂ ಭಾಗವಹಿಸಬೇಕು. ಆಗಸ್ಟ್, 15 ರಂದು ಬೆಳಿಗ್ಗೆ ನಗರದ ಕೋಟೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು, ಹಾಜರಾತಿಯಲ್ಲಿ ತಪ್ಪದೆ ಸಹಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಾಧÀ್ಯವಾದಷ್ಟು ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಆಗಸ್ಟ್ 14 ಮತ್ತು 15 ರಂದು ದೀಪಾಲಂಕಾರ ಮಾಡಬೇಕು. ಪ್ಲಾಸ್ಟಿಕ್ ಧ್ವಜ ಹಾಗೂ ಹೂಗುಚ್ಚ ಬಳಸದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಲಹೆ ಮಾಡಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವ ಶಾಲಾ ಮಕ್ಕಳಿಗೆ ಅಂದು ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಯಿತು. ಜಿಲ್ಲಾಡಳಿತದಿಂದ ಎಸ್.ಎಸ್.ಎಲ್.ಸಿ, ಮತ್ತು ಪಿ.ಯು.ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಶಸ್ತಿ ನೀಡುವ ವ್ಯವಸ್ಥೆಯಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಸ್ವಾತಂತ್ರ್ಯ ದಿನಾಚರಣೆಯನ್ನು ಉತ್ತಮ ರೀತಿಯಲ್ಲಿ ಆಚರಿಸಲು ಸ್ವಾಗತ, ವೇದಿಕೆ, ಧ್ವಜಾರೋಹಣ, ಕವಾಯತು, ಸಾಂಸ್ಕøತಿಕ, ಹಣಕಾಸು, ಆಹಾರ ಮತ್ತಿತರ ಉಪ ಸಮಿತಿಗಳನ್ನು ರಚಿಸಲಾಯಿತು. ಉಪ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ವಹಿಸಿರುವ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಉಪ ಸಮಿತಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ತಾವು ತೆಗೆದುಕೊಂಡ ತೀರ್ಮಾನವನ್ನು ಆಗಸ್ಟ್, 6 ರೊಳಗೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು, ಆಗಸ್ಟ್ 10 ರಂದು ಎಲ್ಲಾ ಉಪ ಸಮಿತಿಯ ಅಧ್ಯಕ್ಷರ ಜತೆ ಸಭೆ ನಡೆಸಲಾಗುವದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ತಿಳಿಸಿದರು.
ನಗರದಲ್ಲಿರುವ ಮಹಾತ್ಮಾ ಗಾಂಧೀಜಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ, ಮಂಗೇರಿರ ಮುತ್ತಣ್ಣ ಮತ್ತು ಕುವೆಂಪು ಅವರ ಪುತ್ಥಳಿ ಸುತ್ತ ಸ್ವಚ್ಛತಾ ಕಾರ್ಯಕೈಗೊಂಡು ಈ ಮಹನೀಯರ ಪುತ್ಥಳಿಗಳಿಗೆ ಹೂವಿನಹಾರ ಮತ್ತು ದೀಪದ ಅಲಂಕಾರ ಮಾಡಲು ಕ್ರಮವಹಿಸ ಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು. ಆಗಸ್ಟ್, 15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಇಡೀ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು ಎಂದ ಅವರು ಈ ಬಾರಿಯೂ ಸಹ ಸಾಂಸ್ಕøತಿಕ ಕಾರ್ಯಕ್ರಮ ಗುಣಮಟ್ಟ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಸಾಂಸ್ಕøತಿಕ ಉಪ ಸಮಿತಿಗೆ ಸಲಹೆ ಮಾಡಿದರು.
ಸ್ವಾತಂತ್ರ್ಯೋತ್ಸವ ಅಂಗವಾಗಿ ಕಾವೇರಿ ಕಲಾಕ್ಷೇತ್ರದಲ್ಲಿ ಸಂಜೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಎಂ.ಸತೀಶ್ ಕುಮಾರ್ ಸೂಚನೆ ನೀಡಿದರು.
ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ರಾಷ್ಟ್ರೀಯ ಕಾರ್ಯ ಕ್ರಮವಾದ್ದರಿಂದ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದಲ್ಲಿ ತೊಡಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಜಿ.ಪಂ.ಉಪ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಸ್ವಾಮಿ, ಉಪ ಪೊಲೀಸ್ ವರಿಷ್ಠಾಧಿಕಾರಿ ನಾಗಪ್ಪ, ಐ.ಪಿ. ಮೇದಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರನ್, ತಹಶೀಲ್ದಾರ್ ಕುಂಞಮ್ಮ, ಜಿ.ಪಂ. ಎಂಜಿನಿಯರ್ ಶಶಿಧರ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪದ್ಮಶೇಖರ ಪಾಂಡೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಳ್ಳಯ್ಯ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಧೀಂದ್ರ ಕುಮಾರ್, ಪ್ರಾದೇಶಿಕ ಸಾರಿಗೆ ಕಚೇರಿಯ ಇನ್ಸ್‍ಪೆಕ್ಟರ್ ರಾಮನಾಥ್, ಸ್ಕೌಡ್ಸ್ ಮತ್ತು ಗೈಡ್ಸ್ ಸಂಸ್ಥೆಯ ದಮಯಂತಿ, ಜಿಲ್ಲಾಧಿಕಾರಿ ಯವರ ಕಚೇರಿಯ ಶಿರಸ್ತೆದಾರರಾದ ಪ್ರವೀಣ್ ಕುಮಾರ್, ಅನಿಲ್ ಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದು ಹಲವು ಸಲಹೆ ನೀಡಿದರು.